×
Ad

ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಹೊಸ 7 ಮರಳು ದಿಬ್ಬಗಳ ಗುರುತು

Update: 2019-11-25 21:02 IST

ಉಡುಪಿ, ನ.25: ಉಡುಪಿ ತಾಲೂಕಿನ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಎನ್‌ಐಟಿಕೆ ತಜ್ಞರ ಮೂಲಕ ಮರು ಸರ್ವೆ ನಡೆಸಲಾಗಿದ್ದು, ಅದರಂತೆ ಉದ್ಯಾವರ ಪಾಪಾನಾಶಿನಿ ಹೊಳೆಯಲ್ಲಿ ನಾಲ್ಕು, ಸ್ವರ್ಣ ನದಿಯಲ್ಲಿ ಮೂರು ಮರಳು ದಿಬ್ಬಗಳನ್ನು ಗುರುತಿಸಲಾಗಿದೆ ಎಂದು ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ರಾಂಜಿ ನಾಯ್ಕ ತಿಳಿಸಿದ್ದಾರೆ.

ಈ ಹಿಂದೆ ಉದ್ದೇಶಪೂರ್ವಕವಾಗಿ ಮರಳು ಇರುವ ಪ್ರದೇಶದ ಬದಲು ಮರಳು ಇಲ್ಲದ ಜಾಗದಲ್ಲಿ ದಿಬ್ಬಗಳನ್ನು ಗುರುತಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಮರು ಸರ್ವೆ ನಡೆಸಲಾಗಿದೆ. ಇದೀಗ ಗುರುತಿಸಿರುವ ದಿಬ್ಬ ಗಳಲ್ಲಿ 3.5 ಲಕ್ಷ ಮೆಟ್ರಿಕ್ ಟನ್ ಮರಳು ದೊರೆಯಲಿದೆ. ಈ ಬಗ್ಗೆ ಏಳು ಮಂದಿಯ ಸದಸ್ಯರ ಸಮಿತಿಯಿಂದ ತೀರ್ಮಾನ ತೆಗೆದುಕೊಂಡು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಡಿಸಿಝೆಡ್‌ಎಂಎಯ ಮೂಲಕ ಅನುಮೋದನೆಗಾಗಿ ರಾಜ್ಯ ಸರಕಾರಕ್ಕೆ ಕಳುಹಿಸಾಗುವುದು ಎಂದರು.

ಉಡುಪಿ ತಾಲೂಕಿನ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಈಗಾಗಲೇ ಉದ್ಯಾವರ ಪಾಪಾನಾಶಿನಿ, ಸ್ವರ್ಣ ಹಾಗೂ ಸೀತಾನದಿಗಳಲ್ಲಿ ಒಟ್ಟು ಎಂಟು ಮರಳು ದಿಬ್ಬಗಳನ್ನು ಗುರುತಿಸಿ 7.92 ಲಕ್ಷ ಮೆಟ್ರಿಕ್ ಟನ್ ಮರಳು ತೆರವುಗೊಳಿಸಲು ಟೆಂಡರ್ ವಹಿಸಿಕೊಡಲಾಗಿದೆ. ಇದರಲ್ಲಿ ಕೆಲವೊಂದು ಸಮಸ್ಯೆ ಹಾಗೂ ಮೀನುಗಾರರ ವಿರೋಧದ ಹಿನ್ನೆಲೆಯಲ್ಲಿ ಪಾಪಾನಾಶಿನಿ ಹೊಳೆಯ ನಾಲ್ಕು ಮರಳು ದಿಬ್ಬಗಳಿಂದ ಮರಳು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿಲ್ಲ. ಉಳಿದಂತೆ ಸ್ವರ್ಣ ಮತ್ತು ಸೀತಾನದಿಯ ನಾಲ್ಕು ದಿಬ್ಬಗಳಿಂದ ನ.19ರವರೆಗೆ ಒಟ್ಟು 1.5ಲಕ್ಷ ಮೆಟ್ರಿಕ್ ಟನ್ ಮರಳನ್ನು ತೆರವುಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

21 ಮರಳು ದಿಬ್ಬಕ್ಕೆ ಟೆಂಡರ್: ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ 2018-19ರಲ್ಲಿ ಒಟ್ಟು 30 ಮರಳು ದಿಬ್ಬಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಏಳು ದಿಬ್ಬಗಳನ್ನು ಲೋಕೋಪಯೋಗಿ ಇಲಾಖೆ, ವಾರಾಹಿ ಯೋಜನೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿತ್ತು. ಉಳಿದ 23 ದಿಬ್ಬಗಳಲ್ಲಿ ಎರಡು ದಿಬ್ಬಗಳ ಟೆಂಡರ್ ಕರೆಯ ಲಾಗಿದ್ದು, ಇಲ್ಲಿ ದಿನಕ್ಕೆ 150 ಲೋಡ್ ಮರಳನ್ನು ತೆರವುಗೊಳಿಸಲಾಗುತ್ತಿದೆ. ಉಳಿದ 21 ದಿಬ್ಬಗಳು ಕೆಲವೊಂದು ನಿಯಮಗಳಿಂದಾಗಿ ಬಾಕಿ ಉಳಿದಿವೆ. ಅದಕ್ಕೆ ಶೀಘವೇ ಮರು ಟೆಂಡರ್ ಕರೆಯುವ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದರು.

ಕಾರ್ಕಳ ತಾಲೂಕಿನಲ್ಲಿ ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಗ್ರಾಪಂ, ಸಣ್ಣ ನೀರಾವರಿ ಇಲಾಖೆ ಹಾಗೂ ಗಣಿ ಇಲಾಖೆಯವರು ಜಂಟಿ ಸರ್ವೆ ನಡೆಸಿ ಒಂದು ಮುಂಡ್ಲಿಯಲ್ಲಿರುವ ಮಧ್ಯಮ ಅಣೆಕಟ್ಟು ಮತ್ತು ಎಂಟು ಸಣ್ಣ ಕಿಂಡಿ ಅಣೆಕಟ್ಟುಗಳನ್ನು ಗುರುತಿಸ ಲಾಗಿದ್ದು, ಇದರಿಂದ ಹೂಳು ತೆಗೆಯಲು ಆಯಾ ಗ್ರಾಪಂಗಳು ಟೆಂಡರ್ ಕರೆಯಲಿವೆ. ಇದರಲ್ಲಿ ಸಿಗುವ ಮರಳನ್ನು ಹರಾಜು ಮಾಡಲಾಗುವುದೆಂದು ಹಿರಿಯ ಭೂವಿಜ್ಞಾನಿ ರಾಂಜಿ ನಾಯ್ಕಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News