ನ.29-30: ‘ಮಂಗಳೂರು ಲಿಟ್ ಫೆಸ್ಟ್’
ಮಂಗಳೂರು, ನ.25: ಮಂಗಳೂರು ಲಿಟರರಿ ಫೌಂಡೇಶನ್ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನ.29 ಮತ್ತು 30ರಂದು ‘ಮಂಗಳೂರು ಲಿಟ್ ಫೆಸ್ಟ್’ ಜರುಗಲಿದೆ ಎಂದು ಲಿಟ್ ಫೆಸ್ಟ್‌ನ ಮುಖ್ಯ ಸಂಘಟಕ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಖಾಸಗಿ ಹೊಟೇಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಐಡಿಯಾ ಆಫ್ ಭಾರತ್ ಟುಡೇ ಆ್ಯಂಡ್ ಟುಮಾರೋ’ ಎಂಬುದು ಈ ವರ್ಷದ ಲಿಟ್‌ಫೆಸ್ಟ್ನ ಆಶಯವಾಗಿದೆ. ಭಾರತೀಯ ಗ್ರಂಥಗಳಲ್ಲಿನ ಪ್ರಾಚೀನ ಐತಿಹಾಸಿಕ ದೃಷ್ಟಿಕೋನವನ್ನು ಬೌದ್ಧಿಕ ಪ್ರವಚನದ ಮೂಲಕ ಜಗತ್ತಿನಾದ್ಯಂತದ ಅತ್ಯುತ್ತಮ ಸಾಹಿತ್ಯಿಕ ಮನಸ್ಸುಗಳಿಂದ ಹೊರಹೊಮ್ಮಿಸುವುದು, ಪ್ರಾಚೀನ ಭಾರತದ ಶಾಂತಿ, ಸಮೃದ್ಧಿ, ಮತ್ತು ವಿಶ್ವ ಕಲ್ಯಾಣದ ಜ್ಞಾನವನ್ನು ಪ್ರತಿಬಿಂಬಿಸುವುದು ಈ ಲಿಟ್‌ಫೆಸ್ಟ್ ನ ಪ್ರಮುಖ ಉದ್ದೇಶವಾಗಿದೆ ಎಂದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕವಿ ಮತ್ತು ಜಾನಪದ ತಜ್ಞ ಡಾ.ಚಂದ್ರಶೇಖರ ಕಂಬಾರ ಲಿಟ್ ಫೆಸ್ಟ್ ಉದ್ಘಾಟಿಸಲಿದ್ದಾರೆ. ನಿಟ್ಟೆ ವಿವಿ ಉಪಕುಲಪತಿ ಡಾ.ಎನ್.ವಿನಯ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭ ಜೀವಮಾನದ ಪ್ರಶಸ್ತಿಯನ್ನು ಸಂಶೋಧಕ, ಲೇಖಕ ಮತ್ತು ಇತಿಹಾಸಕಾರ ಡಾ. ಎಂ. ಚಿದಾನಂದ ಮೂರ್ತಿಗೆ ಪ್ರದಾನಿಸಲಾಗುತ್ತಿದೆ. ವಾಗ್ಮಿಗಳಾಗಿ ಕೇರಳ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಮಾಜಿ ಸೇನಾಧಿಕಾರಿ ಮೇಜರ್ ಜನರಲ್ ಜಿ.ಡಿ. ಬಕ್ಷಿ, ಸರ್ಜಿಕಲ್ ಸ್ಟ್ರೈಕ್‌ನ ರುವಾರಿ ಲೆ.ಜ.ಸತೀಶ್ ದುವಾ, ಪುರಾತತ್ವ ತಜ್ಞ, ಲೇಖಕ ಕೆ.ಕೆ. ಮುಹಮ್ಮದ್, ಸುನೀಲ್ ಅಂಬೇಕರ್, ಶಿವ್ ಅರೂರ್, ಡಾ.ವೇಲ್ ಶೇಖ್ ಹಸನ್ ಅವ್ವದ್, ಮಾರಿಯ ವಿರ್ತ್, ಲೂಸಿ ಗೆಸ್ಟ್, ಸ್ಮಿತಾ ಪ್ರಕಾಶ್, ಬರ್ಖಾ ದತ್, ಆನಂದ್ ರಂಗನಾಥನ್, ತೇಜಸ್ವಿ ಸೂರ್ಯ, ಅತುಲ್ ಕುಲಕರ್ಣಿ, ಮಾನುಷಿ ಸಿನ್ಹಾ, ಟಿ.ಎಸ್ ನಾಗಾಭರಣ, ಎಂ.ಡಿ. ನಲಪತ್, ಡಾ. ಅಜಕ್ಕಳ ಗಿರೀಶ್ ಭಟ್, ಡಾ. ರೋಹಿಣಾಕ್ಷ ಶಿರ್ಲಾಲು, ಡಾ.ವಸಂತ ಕುಮಾರ್ ಪೆರ್ಲ ಸಹಿತ 60ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ.
ನ.29ರಂದು ಸಂಜೆ 5 ಗಂಟೆಗೆ ಅಳ್ವಾಸ್ ಸಾಂಸ್ಕೃತಿಕ ವೈಭವದ ವಿದ್ಯಾರ್ಥಿಗಳು ಸಾಂಸ್ಕೃತಿಕ ಸಂಧ್ಯಾ ಪ್ರಸ್ತುತಪಡಿಸಲಿದ್ದಾರೆ. ‘ಭಾರತವೆಂಬ ಪರಿಕಲ್ಪನೆ: ಇಂದು ಮತ್ತು ನಾಳೆ’ ಎಂಬ ಪ್ರಬಂಧ ಸ್ಪರ್ಧೆಯನ್ನೂ ಆಯೋಜನೆಗೊಳಿಸಲಾಗಿದೆ. ಮಣ್ಣಿನ ಕಲಾಕೃತಿ ರಚನೆ, ಪುಸ್ತಕ ಪ್ರದರ್ಶನ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳೂ ನೆರವೇರಲಿವೆ. ಪುಟಾಣಿ ಮಕ್ಕಳಿಗೆ ಕಥಾ ಅವಧಿಯೂ ಆಯೋಜನೆಗೊಳ್ಳುತ್ತಿದೆ ಎಂದು ಗಣೇಶ್ ಕಾರ್ಣಿಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ರಿಜೇಶ್ ಚೌಟ, ವಸಂತ ಕುಮಾರ್ ಪೆರ್ಲ, ಪ್ರದೀಪ್ ಮೈಸೂರು, ಸುನೀಲ್ ಕುಲಕರ್ಣಿ ಉಪಸ್ಥಿತರಿದ್ದರು.