ಉಕ್ಕಿ ಹರಿಯುತ್ತಿರುವ ಡ್ರೈನೇಜ್ ಗಳು: ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ತಡೆಯಲಾಗುತ್ತಿಲ್ಲ ದುರ್ನಾತ!

Update: 2019-11-25 17:24 GMT

ಮಂಗಳೂರು, ನ.25: ನಗರದ ಪ್ರಮುಖ ಸ್ಥಳವಾದ ಜ್ಯೋತಿ ಸರ್ಕಲ್ ನಲ್ಲಿ ಎರಡು ಡ್ರೈನೇಜ್ ಗಳಿಂದ ಕಲುಷಿತ ನೀರು ಹೊರಬರುತ್ತಿದ್ದು, ಅಲ್ಲಿ ಬಸ್ ಗಳಿಗಾಗಿ ಕಾಯುವ ಜನರು ಮೂಗು ಮುಚ್ಚಿಕೊಂಡೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ಹಲವು ದಿನಗಳಿಂದ ಜನರು ಇಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಿದ್ದು, ಇನ್ನೂ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಜ್ಯೋತಿ ಪ್ರಮುಖ ಜಂಕ್ಷನ್ ಕೆಎಂಸಿ ಆಸ್ಪತ್ರೆ ಬಳಿ ಇರುವ ಡ್ರೈನೇಜ್ ಮತ್ತು ಜ್ಯೋತಿ ಟಾಕೀಸ್ ಬಳಿ ಇರುವ ಡ್ರೈನೇಜ್ ಒಂದರಿಂದ ಕಲುಷಿತ ನೀರು ಹೊರಬರುತ್ತಿದೆ. ಈ ಪ್ರದೇಶವು ಜನನಿಬಿಡವಾಗಿದ್ದು, ಸಂಜೆ ವೇಳೆಗೆ ಬಸ್ ಗಳಿಗೆ ಕಾಯುತ್ತಾ ನೂರಾರು ಮಂದಿ ಇಲ್ಲಿ ನಿಲ್ಲುತ್ತಾರೆ. ಆದರೆ ಈ ಸಮಸ್ಯೆಯಿಂದ ಬಸ್ ಗಳಿಗೆ ಕಾಯುವ ಪ್ರಯಾಣಿಕರು ಉಸಿರಾಡಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. 'ಇಲ್ಲಿ ಹೆಚ್ಚು ಹೊತ್ತು ನಿಲ್ಲುವುದರಿಂದ ಉಸಿರಾಟಕ್ಕೆ ಸಮಸ್ಯೆಯಾಗುತ್ತಿದೆ' ಎಂದು ಹಿರಿಯ ನಾಗರಿಕರು ಅಳಲು ತೋಡಿಕೊಳ್ಳುತ್ತಾರೆ.

"ಇದು ಅತ್ಯಂತ ಅಪಾಯಕಾರಿ. ನಗರಾಡಳಿತವು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲಿನ ಬಸ್ ನಿಲ್ದಾಣದಲ್ಲಿ ಸಾವಿರಾರು ಮಂದಿ ಬಸ್ ಗಳಿಗಾಗಿ ಕಾಯುತ್ತಾರೆ. ಈ ಜನರ ಆರೋಗ್ಯಕ್ಕೆ ಈ ಚರಂಡಿಗಳ ಮಾಲಿನ್ಯವು ಹಾನಿಕಾರಕ" ಎಂದು ಬಸ್ ಪ್ರಯಾಣಿಕ ಧನಂಜಯ್ ಶೆಟ್ಟಿ ಹೇಳುತ್ತಾರೆ.

"ಹಲವು ತಿಂಗಳುಗಳಿಂದ ಈ ಸಮಸ್ಯೆಯಿದೆ. ಆದರೆ ಇದು ನಗರಾಡಳಿತದ ಅಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲ. ಸಂಜೆ ವೇಳೆ ಈ ಪ್ರದೇಶವು ಜನನಿಬಿಡವಾಗುತ್ತದೆ. ಈ ರಸ್ತೆಯಲ್ಲಿ ನಡೆದಾಡುವ ಜನರಿಗೆ ಈ ದುರ್ನಾತದಿಂದ ಸಮಸ್ಯೆಯಾಗುತ್ತಿದೆ" ಎಂದು ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಸುಮಿತ್ ಭಟ್ ಹೇಳುತ್ತಾರೆ.

ಈ ಬಗ್ಗೆ 'ವಾರ್ತಾ ಭಾರತಿ' ಮಂಗಳೂರು ಮಹಾ ನಗರ ಪಾಲಿಕೆ ಕಮಿಶನರ್ ಅಜಿತ್ ಶಾನಾಡಿಯವರನ್ನು ಸಂಪರ್ಕಿಸಿದ್ದು, ಈ ಸಮಸ್ಯೆಯು ಆಡಳಿತದ ಗಮನಕ್ಕೆ ಬಂದಿದೆ. ವಾರದೊಳಗೆ ಇದನ್ನು ದುರಸ್ತಿಪಡಿಸಲಾಗುವುದು ಎಂದು ಅವರು ಹೇಳಿದರು.

ಆದರೆ ಈ ಬಗ್ಗೆ ವಾರ್ಡ್ ಕೌನ್ಸಿಲರ್ ಎ.ಸಿ. ವಿನಯರಾಜ್ ಬೇರೆಯದೇ ಮಾತುಗಳನ್ನು ಹೇಳುತ್ತಾರೆ.

"ಈ ಸಮಸ್ಯೆಗೆ ಅಜಿತ್ ಶಾನಾಡಿಯವರೇ ಕಾರಣ. ಸಮಸ್ಯೆ ಪರಿಹಾರಕ್ಕೆ ಅವರು ಸಹಕರಿಸುತ್ತಿಲ್ಲ. 4 ತಿಂಗಳುಗಳಿಂದ ನಾನು ಈ ಸಮಸ್ಯೆ ಪರಿಹರಿಸುವಂತೆ ಕೇಳುತ್ತಲೇ ಇದ್ದೇನೆ. ಆದರೆ ಅವರು ಈ ಬಗ್ಗೆ ಗಮನಹರಿಸುತ್ತಿಲ್ಲ. ಚರಂಡಿ ದುರಸ್ತಿ ಮಾಡದಿದ್ದರೆ ರಸ್ತೆ ತಡೆ ನಡೆಸುವುದಾಗಿ ಎಚ್ಚರಿಸಿದ್ದೆ. 2 ದಿನಗಳಲ್ಲಿ ದುರಸ್ತಿಗೊಳಿಸುವುದಾಗಿ ಅವರು ಹೇಳಿದ್ದರು" ಎಂದು ವಿನಯರಾಜ್ ಹೇಳುತ್ತಾರೆ.

"ಜೂನಿಯರ್ ಇಂಜಿನಿಯರ್ ಗಳ ಜೊತೆಯೂ ನಾನು ಮಾತನಾಡಿದ್ದೇನೆ. ಅವರು ಒಬ್ಬರು ಮತ್ತೊಬ್ಬರ ಮೇಲೆ ಆರೋಪ ಹೊರಿಸುತ್ತಾರೆ. ನಿಧಿ ಇಲ್ಲ ಎಂದು ದುರಸ್ತಿ ಕಾಮಗಾರಿಗೆ ಅಜಿತ್ ಶಾನಾಡಿ ಮುಂದಾಗುತ್ತಿಲ್ಲ ಎಂದು ಇಂಜಿನಿಯರ್ ಗಳು ಹೇಳುತ್ತಾರೆ" ಎಂದು ವಿನಯರಾಜ್ ಆರೋಪಿಸಿದರು.

ಆರೋಪ-ಪ್ರತ್ಯಾರೋಪಗಳೇನೇ ಇರಲಿ ವಿವಿಧ ರಾಜ್ಯಗಳ ಜನರು, ವಿದ್ಯಾರ್ಥಿಗಳಿರುವ, ಪ್ರತಿಷ್ಠಿತ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳಿರುವ ಮಂಗಳೂರಿನ ಪ್ರಮುಖ ಪ್ರದೇಶದಲ್ಲೇ ಈ ಗಂಭೀರ ಸಮಸ್ಯೆಯಿರುವುದು ಮಂಗಳೂರಿಗೆ ಮಾಡುವ ಅವಮಾನ. ನಗರಾಡಳಿತದ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಬೇಕು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕಾರ್ಟೂನ್
 

Writer - ಇಸ್ಮಾಯೀಲ್ ಝೌರೇಝ್

contributor

Editor - ಇಸ್ಮಾಯೀಲ್ ಝೌರೇಝ್

contributor

Similar News