×
Ad

ಮಂಗಳೂರಿನಲ್ಲಿ ನಕಲಿ ಭಾರತೀಯ ಸೇನಾಧಿಕಾರಿಯ ಬಂಧನ

Update: 2019-11-25 21:33 IST

ಮಂಗಳೂರು, ನ. 25: ಭಾರತೀಯ ಸೇನಾ ಅಧಿಕಾರಿ ಎಂದು ಪರಿಚಯಿಸಿಕೊಂಡು ಕಾರ್ಯಕ್ರಮ ಆಯೋಜಿಸುತ್ತಾ, ಸಾರ್ವಜನಿಕರನ್ನು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಭಾರತೀಯ ಸೇನಾ ಗುಪ್ತದಳದ ಅಧಿಕಾರಿಗಳು ಮತ್ತು ಮಂಗಳೂರು ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುರತ್ಕಲ್ ಸಮೀಪದ ಶ್ರೀಕೃಷ್ಣ ಎಸ್ಟೇಟ್ ನಿವಾಸಿ ಮಂಜುನಾಥ ರೆಡ್ಡಿ ಬಂಧಿತ ನಕಲಿ ಭಾರತೀಯ ಸೇನಾ ಅಧಿಕಾರಿ ಎಂದು ಗುರುತಿಸಲಾಗಿದೆ.

ಭಾರತೀಯ ಸೇನೆಯ ದಕ್ಷಿಣ ಕಮಾಂಡ್ ಲಿಯೇಷನ್ ಘಟಕದ ಗುಪ್ತದಳದ ಅಧಿಕಾರಿ ಮೇಜರ್ ಸ್ವಾತಿ ಧಾರವಾಡ್ಕರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀನಿವಾಸ ಗೌಡ ನೇತೃತ್ವದ ತಂಡ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಿದೆ.

ಆರೋಪಿಯು ಸುರತ್ಕಲ್‌ನ ಕೃಷ್ಣ ಎಸ್ಟೇಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಭಾರತೀಯ ಸೇನೆಯ ಅಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಿದ್ದ ಈತ, ಸೇನಾ ಸಮವಸ್ತ್ರ ಧರಿಸಿ ಓಡಾಡುತ್ತಿದ್ದ. ಹುತಾತ್ಮ ಯೋಧರ ಕುಟುಂಬದವರಿಗೆ ಸನ್ಮಾನ ಸಮಾರಂಭಗಳನ್ನು ಆಯೋಜಿಸುತ್ತಿದ್ದ. ನಂತರ ಅವರ ವಿಶ್ವಾಸ ಗಳಿಸಿ, ಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ವಂಚಿಸುತ್ತಿದ್ದ ಎಂದು ಸೇನೆಯ ದಕ್ಷಿಣ ಕಮಾಂಡ್ ಲಿಯೇಷನ್ ಘಟಕ ತಿಳಿಸಿದೆ.

ಬಂಧಿತ ಆರೋಪಿಯಿಂದ ಸೇನಾ ಸಿಬ್ಬಂದಿಯ ಸಮವಸ್ತ್ರ, ನಕಲಿ ಗುರುತಿನ ಚೀಟಿಗಳು, ಸೇನೆಯ ಹೆಸರಿನಲ್ಲಿರುವ ನಕಲಿ ರಬ್ಬರ್ ಸ್ಟಾಂಪ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 171, 419, 420 ಯಂತೆ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯು ಬೆಳಗಾವಿಯ ಮರಾಠಾ ಲಘು ಪದಾತಿದಳದ ಘಟಕದಲ್ಲಿ ಸಿವಿಲ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಸೇನೆಯ ನಾಯ್ಕಾ ಸುಬೇದಾರ್, ಸುಬೇದಾರ್, ಸುಬೇದಾರ್ ಮೇಜರ್ ಹುದ್ದೆಗಳಲ್ಲಿ ತನ್ನನ್ನು ನಿಯೋಜಿಸಲಾಗಿದೆ ಎಂದು ಬಿಂಬಿಸಿಕೊಂಡು ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ. ಈ ರೀತಿ ಹಲವು ಮಂದಿಯನ್ನು ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಸಾಧ್ಯತೆ ಇದೆ ಎಂದು ತನಿಖಾ ತಂಡ ತಿಳಿಸಿದೆ.

ಈತನ ಹಿಂದೆ ಬೃಹತ್ ವಂಚಕ ಜಾಲವೇ ಇರುವ ಸಾಧ್ಯತೆ ಇದೆ. ಈ ಕೆಲಸವನ್ನು ಈತನೊಬ್ಬನೇ ಮಾಡಿದಂತಿಲ್ಲ. ಬೆಳಗಾವಿಯ ಮರಾಠಾ ಲಘು ಪದಾತಿದಳದ ಅಥವಾ ಇತರ ಮರಾಠಾ ಸೇನಾ ದಳಗಳ ಯಾವುದಾದರೂ ಅಧಿಕಾರಿ, ಸಿಬ್ಬಂದಿ ಶಾಮೀಲಾಗಿರುವ ಸಾಧ್ಯತೆಯೂ ಇದೆ. ಈ ಕುರಿತು ಪೊಲೀಸರು ಮತ್ತು ಸೇನಾ ಗುಪ್ತದಳ ತನಿಖೆ ಮುಂದುವರಿಸಿವೆ.

ಸೇನೆಯಲ್ಲಿ ಯಾವುದೇ ರೀತಿಯ ನೇಮಕಾತಿಗಳಿಗೆ ಯಾರಿಂದಲೂ ಹಣ ಸಂಗ್ರಹಿಸುವುದಿಲ್ಲ. ಮಧ್ಯವರ್ತಿಗಳ ಹಾವಳಿಗೂ ಅವಕಾಶವಿಲ್ಲ. ಈ ಕುರಿತು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ತನಿಖಾ ತಂಡ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News