ಕೋರ್ದಬ್ಬು ಭಂಡಾರ ದೈವಸ್ಥಾನದಲ್ಲಿ ಕಳವು
ಮಂಗಳೂರು, ನ.25: ಬಂಗ್ರಕೂಳೂರು ಗ್ರಾಮದ ಪಡ್ಡೋಡಿ ಅಂಗಡಿಮಾರ್ ಶ್ರೀ ಕೋರ್ದಬ್ಬು ಭಂಡಾರ ದೈವಸ್ಥಾನಕ್ಕೆ ರವಿವಾರ ತಡರಾತ್ರಿ ಕಳ್ಳರು ನುಗ್ಗಿ 1.25 ಲಕ್ಷ ರೂ. ಮೌಲ್ಯದ 5 ಕೆ.ಜಿ.ಬೆಳ್ಳಿಯ ಆಭರಣ ಹಾಗೂ 2,100 ರೂ. ನಗದು ಕಳವು ಮಾಡಿದ್ದಾರೆ.
ಪಕ್ಕದ ಮನೆಯವರಾದ ಗುರುವಪ್ಪ ಎನ್ನುವವರು ಸೋಮವಾರ ಬೆಳಗ್ಗೆ 5:30ರ ವೇಳೆಗೆ ನೋಡಿದಾಗ ದೈವಸ್ಥಾನದ ಎದುರು ಬಾಗಿಲಿನ ಹೊರಗಿನ ಚಿಲಕ ಹಾಕಿದ್ದು, ಬೀಗವನ್ನು ಮುರಿದು ಅಂಗಳದಲ್ಲಿ ಎಸೆಯಲಾಗಿತ್ತು. ಈ ಕುರಿತು ದೈವಸ್ಥಾನದ ಗುರಿಕಾರ ಮತ್ತು ಅರ್ಚಕರಿಗೆ ಅವರು ಕರೆ ಮಾಡಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ರಾತ್ರಿ 1 ಗಂಟೆಯ ವೇಳೆಗೆ ಬಹಿರ್ದೆಸೆಗಾಗಿ ಎದ್ದಿದ್ದ ಅವರು ದೈವಸ್ಥಾನವನ್ನು ಗಮನಿಸಿ ಮಲಗಿದ್ದರು. ಅದರ ಬಳಿಕ ಬೆಳಗ್ಗಿನ 5:30ರ ನಡುವಿನ ಅವಧಿಯಲ್ಲಿ ಬೀಗ ಮುರಿದು ಒಳ ಪ್ರವೇಶಿಸಿದ್ದ ಕಳ್ಳರು ಗೋದ್ರೇಜ್‌ನ ಸೇಫ್ ಲಾಕರ್‌ನಲ್ಲಿ ಇರಿಸಲಾಗಿದ್ದ ಬೆಳ್ಳಿಯ ಸೊತ್ತು ಮತ್ತು ನಗದನ್ನು ಕಳವು ಮಾಡಿದ್ದಾರೆ.
ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.