ನ್ಯಾಯ ದೊರಕದೆ ಎಂಆರ್‌ಪಿಎಲ್ ಕಾಮಗಾರಿಗೆ ಅವಕಾಶ ನೀಡೆವು: ಜೋಕಟ್ಟೆ ಸಂತ್ರಸ್ತರು
ಮಂಗಳೂರು, ನ.25: ಪರಿಸರ ನಿಯಮ ಪಾಲಿಸದ ಎಂಆರ್‌ಪಿಎಲ್ ಪೊಲೀಸ್ ಬಲಪ್ರಯೋಗದಿಂದ ಕಾಮಗಾರಿ ನಡೆಸಲು ಮುಂದಾಗಿದೆ. ತಮಗೆ ನ್ಯಾಯ ದೊರಕುವವರೆಗೂ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಜೋಕಟ್ಟೆ ಸಂತ್ರಸ್ತರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
‘ಸ್ಥಳೀಯ ಯುವಜನರಿಗೆ ಉದ್ಯೋಗ ನೀಡದ, ಸರಕಾರದ ಆದೇಶ ಉಲ್ಲಂಘಿಸುವ ಎಂಆರ್‌ಪಿಎಲ್ ಕಂಪೆನಿಯ ಕೆಲವು ಕಾಮಗಾರಿಗಳನ್ನು ಜೋಕಟ್ಟೆ ಗ್ರಾಮದಲ್ಲಿ ತಡೆ ಹಿಡಿದಿದ್ದೇವೆ. ಇದೀಗ ಪೊಲೀಸ್ ರಕ್ಷಣೆಯೊಂದಿಗೆ ಬಲಪ್ರಯೋಗದ ಕಾಮಗಾರಿ ನಡೆಸಲು ಮುಂದಾಗಿದೆ. ಕಾಮಗಾರಿಗೆ ಒಡ್ಡಿರುವ ತಡೆಯನ್ನು ತಕ್ಷಣ ತೆರವು ಗೊಳಿಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ. ಮಾಲಿನ್ಯದಿಂದ ಕಂಗೆಟ್ಟಿರುವ ಸಂತ್ರಸ್ಥ ಗ್ರಾಮಸ್ಥರು ಮಹಿಳೆಯರು, ಮಕ್ಕಳ ಸಹಿತ ಜೈಲು ಸೇರಲು ಸಿದ್ಧ ಎಂದು ಘೋಷಿಸಿ, ನ್ಯಾಯ ದೊರಕದೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ’ ಎಂದು ಸಂತ್ರಸ್ತರು ಜಿಲ್ಲಾಧಿಕಾರಿ, ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ನೀಡಿದ್ದಾರೆ.
‘ಉದ್ಯೋಗ ವಂಚನೆ, ಪರಿಸರ ಮಾಲಿನ್ಯ, ನಮ್ಮ ನೆಲ, ಜಲದ ಮೇಲೆ ಕಂಪೆನಿ ನಡೆಸುತ್ತಿರುವ ದೌರ್ಜನ್ಯ, ಸ್ಥಳೀಯರ ಬದುಕಿನೊಂದಿಗಿನ ಚೆಲ್ಲಾಟವನ್ನು ಖಂಡಿಸಿ ಈ ಹೋರಾಟದ ಭಾಗವಾಗಲು, ಬಂಧನ, ಜೈಲು ಪ್ರವೇಶದಲ್ಲಿ ಮೊದಲಿಗರಾಗಲು ನಿರ್ಧರಿಸಿದ್ದೇವೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.
ಇದು ತುಳುನಾಡಿನ ಜನ ಸಮೂಹದ ಭವಿಷ್ಯದ ಭಾಗವಾಗಿ ತೆಗೆದುಕೊಂಡ ನಿರ್ಧಾರ. ಉದ್ಯೋಗ, ಬದುಕುವ ಹಕ್ಕಿಗಾಗಿ ತೆಗೆದುಕೊಂಡ ತೀರ್ಮಾನ. ತುಳುನಾಡಿನ ಯುವ ಜನತೆ ಬಂಧನ, ಜೈಲುವಾಸದ ಈ ಕಠಿಣ ನಿರ್ಧಾರದಲ್ಲಿ ನಮ್ಮನ್ನು ಏಕಾಂಗಿಯಾಗಿಸದು ಎಂಬ ನಂಬಿಕೆಯಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.