ಡಿ. 1ರಿಂದ ಫಾಸ್ಟ್ಯಾಗ್ ಅಳವಡಿಕೆ ಕಡ್ಡಾಯ : ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಸಭೆ

Update: 2019-11-25 17:16 GMT

ಪಡುಬಿದ್ರಿ: ಡಿಸೆಂಬರ್ 1ರಿಂದ ಫಾಸ್ಟ್ಯಾಗ್ ಮೂಲಕ ಟೋಲ್‍ಪಾವತಿಯನ್ನು ಕಡ್ಡಾಯಗೊಳಿಸಲಾಗಿದ್ದು, ವಾಹನ ಮಾಲಕ ರೆಲ್ಲರೂ ಇದಕ್ಕೆ ತಮ್ಮ ವಾಹನವನ್ನು ಹೊಂದಾಣಿಕೆ ಮಾಡಿಕೊಳ್ಳಬೇಕಿದೆ.  ಟೋಲ್ ಗೇಟ್‍ಗಳ ಒಂದು ಪ್ರವೇಶಾತಿಯಲ್ಲಿ ಮಾತ್ರ ವಾಹನದಲ್ಲಿ ಡಿ. 1ರಿಂದ ಫಾಸ್ಟ್ಯಗ್ ಇಲ್ಲದಿದ್ದಲ್ಲಿ ದುಪ್ಪಟ್ಟು ಸುಂಕ ಪಾವತಿಸಿ ಹೋಗಬೇಕಾಗುತ್ತದೆ ಎಂದು ಎನ್‍ಎಚ್‍ಎಐ ಪ್ರತಿನಿಧಿ ನವೀನ್ ಹೇಳಿದರು.

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಫಾಸ್ಟ್ಯಾಗ್ ಅಳವಡಿಕೆಗೆ ಸಂಬಂಧಿಸಿ ಸಾರ್ವಜನಿಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮೂರು ದಿನಗಳಲ್ಲಿ (ನ. 28ಕ್ಕೆ) ಫಾಸ್ಟ್ಯಾಗ್‍ ಮುಕ್ತವಾಗಿ ನೀಡಲು ನಿರೀಕ್ಷಿಸುತ್ತಿದ್ದು ಬಂದಲ್ಲಿ ವಿತರಣೆ ಮಾಡುತ್ತೇವೆ. ಸಂಗ್ರಹ ನಿಜವಾಗಿಯೂ ವಿಳಂಬವಾದಲ್ಲಿ ಅಥವಾ ಸಾಕಷ್ಟು ಲಭ್ಯವಾಗದಿದ್ದಲ್ಲಿ ಎಲ್ಲೆಡೆಗಳ ಪರಿಸ್ಥಿತಿಯನ್ನು ತುಲನೆ ಮಾಡಿ ಎನ್‍ಎಚ್‍ಎಐ ಇದನ್ನು ಕೇಂದ್ರದ ಅನುಮತಿಯೊಂದಿಗೆ ಮುಂದೂಡಬಹುದಾಗಿದೆ ಎಂದು ಎನ್‍ಎಚ್‍ಎಐ ಪ್ರತಿನಿದಿ ನವೀನ್ ವಿವರಿಸಿದರು.

ಪೇಟಿಎಂ, ಆ್ಯಕ್ಸಿಸ್ ಬ್ಯಾಂಕ್ ಹಾಗೂ ಎನ್‍ಎಚ್‍ಎಐಗಳ ವತಿಯಿಂದ ವಾಹನ ಸವಾರರಿಗೆ ಫಾಸ್ಟ್ಯಾಗ್‍ ಖರೀದಿ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಎಲ್ಲಾ ಕೌಂಟರ್‍ಗಳಲ್ಲಿ ವಾಹನದ ಆರ್‍ಸಿ (ನೋಂದಣಿ ದಾಖಲೆ), ಆಧಾರ್‍ಕಾರ್ಡ್ ಅಥವಾ ಚಾಲನಾ ಪರವಾನಿಗೆಗಳ ದಾಖಲೆಗಳೊಂದಿಗೆ ವಾಹನದ ವಿವರಗಳನ್ನು ಅವರಿಗೆ ನೀಡಿದಲ್ಲಿ ಯಾವುದೇ ಪಾವತಿಗಳಿಲ್ಲದೇ ಮುಕ್ತವಾಗಿ ದೊರಕುವ ಫಾಸ್ಟ್ಯಾಗನ್ನು ಸಕ್ರಿಯಗೊಳಿಸಲಾಗುತ್ತದೆ. ಆದರ ಒಂದು ಸ್ಟಿಕ್ಕರನ್ನೂ ಕಾರಲ್ಲಿ ಅಂಟಿಸಲಾಗುತ್ತದೆ. ಈ ಖಾತೆಯನ್ನು ನಿಯಮಿತವಾಗಿ ರೀಚಾರ್ಜ್ ಮಾಡಿಸಬೇಕು. 200ರೂ. ಕನಿಷ್ಟ ಮಿತಿಯಾಗಿದ್ದು, ಇದು ಇದ್ದಲ್ಲಿ ಮಾತ್ರ ಟೋಲ್‍ಗೇಟಲ್ಲಿ ವಾಹನ ಪ್ರವೇಶಿಸುತ್ತಲೇ ಆಯಾಯ ಹೆದ್ದಾರಿ ಸುಂಕವು ವಾಹನ ಮಾಲಕನ ಖಾತೆಯಿಂದ ಕಡಿತವಾಗುತ್ತದೆ. ನಿತ್ಯ ನಿರಂತರ 265 ರೂ. ಪಾಸ್‍ಗಳನ್ನು ಹೊಂದಿರುವ ವಾಹನ ಮಾಲಕರು ಟೋಲ್‍ಗೇಟ್ ಕಚೇರಿಯನ್ನು ಸಂಪರ್ಕಿಸಿದಲ್ಲಿ ಆ ವಾಹನಗಳಿಗೆ ಫಾಸ್ಟ್ಯಾಗನ್ನು ಸಕ್ರಿಯಗೊಳಿಸಲಾಗುವುದು ಎಂದು ನವಯುಗ ಹೆಜಮಾಡಿ ಟೋಲ್‍ಗೇಟ್  ಪ್ರಬಂಧಕ ಶಿವಪ್ರಸಾದ್ ರೈ ಹೇಳಿದರು.

ಸ್ಥಳೀಯರಿಗೆ ವಿನಾಯಿತಿ: ಜಿಲ್ಲಾಮಟ್ಟದಲ್ಲಿ ಚರ್ಚೆ

ಫಾಸ್ಟ್ಯಾಗ್ ಆರಂಭಗೊಳ್ಳುವುದರಿಂದ ಸ್ಥಳೀಯ ವಾಹನಗಳು, ಹೆಜಮಾಡಿ ಒಳ ರಸ್ತೆಗಳಲ್ಲಿ ಸಂಚರಿಸುವ 20 ಸ್ಥಳೀಯ ಬಸ್ಸು ಗಳಿಗೆ ನೀಡಬಹುದಾದ ರಿಯಾಯಿತಿ, 5 ಕಿಮೀ. ಒಳಗಿನ ಟೂರಿಸ್ಟ್ ಕಾರುಗಳು ಮತ್ತು ಖಾಸಗಿ ವಾಹನಗಳಿಗೆ ಲಭ್ಯವಾಗಬಹು ದಾದ ರಿಯಾಯಿತಿಗಳಿಗೆ ಜಿಲ್ಲಾಡಳಿತ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು  ಕಾಪು ವೃತ್ತ ನಿರೀಕ್ಷಕ ಮಹೇಶ್‍ಪ್ರಸಾದ್ ಹೇಳಿದರು.

ಸಭೆಯಲ್ಲಿ ಪಡುಬಿದ್ರಿ ಠಾಣಾಧಿಕಾರಿ ಸುಬ್ಬಣ್ಣ, ಪ್ರೊಬೆಶನರಿ ಪಿಎಸ್‍ಐ ಸದಾಶಿವ ಗವರೋಜಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News