×
Ad

ಬಂಟ್ವಾಳ : ಪಾದಚಾರಿಗೆ ಢಿಕ್ಕಿ ಹೊಡೆದ ಬಸ್ ; ಚಾಲಕ, ನಿರ್ವಾಹಕನ ವಿರುದ್ಧ ದೂರು

Update: 2019-11-25 22:58 IST

ಬಂಟ್ವಾಳ : ಪಾದಚಾರಿಯೋರ್ವರಿಗೆ ಢಿಕ್ಕಿ ಹೊಡೆದು ಪರಾರಿಯಾಗಿರುವ ಕಂಟ್ರಾಕ್ಟ್ ಕ್ಯಾರೇಜ್ ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ನ. 19 ರಂದು ಸಂಜೆ ಬಿ ಸಿ ರೋಡಿನ ಹೋಟೆಲ್ ಸತ್ಕಾರ್ ಬಳಿ ಹೆದ್ದಾರಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ನೇರಳಕಟ್ಟೆ ನಿವಾಸಿ ಪತ್ರಕರ್ತ ಅಬ್ದುಲ್ ಲತೀಫ್ ಎಂಬವರಿಗೆ ಮಂಗಳೂರಿನಿಂದ ಬಂದ ಅರಫಾ ಎಂಬ ಹೆಸರಿನ ಕಂಟ್ರಾಕ್ಟ್ ಕ್ಯಾರಿಯೇಜ್ ಬಸ್ (ಕೆಎ21ಬಿ4071) ನ ಚಾಲಕ ಪ್ರಯಾಣಿಕರನ್ನು ಹತ್ತಿಸುವ ಹಾಗೂ ಇಳಿಸುವ ಧಾವಂತದಲ್ಲಿ ಢಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡ ಲತೀಫ್ ಬಗ್ಗೆ ಯಾವುದೇ ನಿಗಾ ವಹಿಸಿಲ್ಲ ಎನ್ನಲಾದ ಅರಫಾ ಬಸ್ಸು ಚಾಲಕ ಹಾಗೂ ನಿರ್ವಾಹಕರು ಬಸ್ ಸಮೇತ ಸ್ಥಳದಿಂದ ಪರಾರಿಯಾಗಿದ್ದು, ಸಾರ್ವಜನಿಕರು ಲತೀಫ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ ಅವರ ಆರೋಗ್ಯ ಚೇತರಿಕೆ ಕಾಣದೆ ಅವರ ನೋವು ಉಲ್ಬಣಗೊಂಡ ಪರಿಣಾಮ ನಡೆದಾಡಲು ಆಗದ ಸ್ಥಿತಿಯಲ್ಲಿದ್ದು, ಇದೀಗ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದು ಸೋಮವಾರ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಸಂಚಾರಿ ಪೊಲೀಸರು ಆರೋಪಿತ ಅರಫಾ ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಸಿಸಿ ಬಸ್ಸುಗಳು ದಾರಿ ಮಧ್ಯೆ ಜನ ಹತ್ತಿಸಿ-ಇಳಿಸುವಂತಿಲ್ಲ : ಎಆರ್‍ಟಿಒ ಚರಣ್

ಕಂಟ್ರಾಕ್ಟ್ ಕ್ಯಾರಿಯೇಜ್ ಬಸ್ಸುಗಳು ಸಾರಿಗೆ ನಿಯಮಾವಳಿಯಂತೆ ಪರವಾನಿಗೆ ಪಡೆದ ಸ್ಥಳಗಳಲ್ಲಿ ಅಲ್ಲದೆ ದಾರಿ ಮಧ್ಯೆ ಜನರನ್ನು ಹತ್ತಿಸುವಂತೆಯೂ ಇಲ್ಲ, ಇಳಿಸುವಂತೆಯೂ ಇಲ್ಲ. ಮಂಗಳೂರಿನಿಂದ ಜನ ಹತ್ತಿಸಿದ ಬಳಿಕ ನೇರವಾಗಿ ತಮ್ಮ ಪರವಾನಿಗೆಯ ಸ್ಥಳವಾದ ಉಪ್ಪಿನಂಗಡಿ, ಪುತ್ತೂರು, ಧರ್ಮಸ್ಥಳ ಮೊದಲಾದ ನಿರ್ದಿಷ್ಟ ಜಾಗದಲ್ಲಿ ಮಾತ್ರ ನಿಲ್ಲಿಸತಕ್ಕದ್ದು. ನಡುವೆ ನಿಲ್ಲಿಸಿ ಜನ ಹತ್ತಿಸುವುದು ಕಾನೂನು ಬಾಹಿರ ಎಂದು ಬಂಟ್ವಾಳ ಪ್ರಭಾರ ಸಾರಿಗೆ ಅಧಿಕಾರಿ ಚರಣ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News