ಸಂವಿಧಾನ ಇಲ್ಲದೇ ಕಾನೂನು ಪಾಲನೆ ಅಸಾಧ್ಯ: ಭಾಸ್ಕರ ವಿಟ್ಲ

Update: 2019-11-26 11:59 GMT

ಬಂಟ್ವಾಳ, ನ.26: ಸಂವಿಧಾನ ಇಲ್ಲದೇ ಕಾನೂನು ಪಾಲನೆ ಅಸಾಧ್ಯವಾಗಿದ್ದು, ದೇಶದ ಭ್ರಾತೃತ್ವ, ಸಹೋದರತೆ ಹಾಗೂ ಸಮಾನತೆಗಾಗಿ ಸಂವಿಧಾನವನ್ನು ಉಳಿಸುವ ಕಾರ್ಯವಾಗಬೇಕಾಗಿದೆ ಎಂದು ಮಂಗಳೂರು ಕೆಪಿಟಿ ಕಾಲೇಜಿನ ಹಿರಿಯ ಶ್ರೇಣಿಯ ಉಪನ್ಯಾಸಕ ಭಾಸ್ಕರ ವಿಟ್ಲ ಹೇಳಿದ್ದಾರೆ.

ಪಾಣೆಮಂಗಳೂರು ಶ್ರೀಶಾರದಾ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಕಾನೂನು ಪಾಲನೆ ಆಗದೇ ಇದ್ದಲ್ಲಿ ಹಕ್ಕುಗಳ ರಕ್ಷಣೆ ಅಸಾಧ್ಯ. ಹಕ್ಕುಗಳಿಗೆ ತೊಡಕುಂಟಾದಾಗ ನಾವು ಸವಲತ್ತುಗಳನ್ನು ಕಳೆದುಕೊಂಡು ದುರ್ಬಲರಾಗುತ್ತೇವೆ ಎಂದರು.
ಇಂದಿನ ದಿನಗಳಲ್ಲಿ ಸಂವಿಧಾನವನ್ನು ಉಳಿಸುವ ನಮ್ಮೆಲ್ಲರ ಜಬಾಬ್ದಾರಿಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂವಿಧಾನದ ಪ್ರತಿಯನ್ನು ಖರೀದಿಸಿ ದಿನಕ್ಕೆ ಒಂದು ಪುಟವಾದರೂ ಓದುವುದರ ಜೊತೆಗೆ ನಿರಂತರ ಅಭ್ಯಾಸ ಮಾಡುವ ಮೂಲಕ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಹಕ್ಕುಗಳನ್ನು ರಕ್ಷಣೆ ಮಾಬೇಕಾಗಿದೆ ಎಂದರು.
ದೇಶದ ಸಂವಿಧಾನವು ರೂಪುಗೊಳ್ಳುವುದರ ಹಿಂದೆ ಸಂಘರ್ಷ ನಡೆದಿದ್ದು, ಈಗಲೂ ಸಂಘರ್ಷಗಳು ನಡೆಯುತ್ತಿವೆ ಎಂದ ಅವರು, ಪ್ರತಿಯೊಂದು ವಿಚಾರಕ್ಕೂ ಹಕ್ಕಗಳನ್ನು ನೀಡಿರುವ ಏಕೈಕ, ಅದ್ಭುತ ಸಂವಿಧಾನ ನಮ್ಮದಾಗಿದೆ. ಮಹಿಳೆಯರಿಗೆ ಸಮಾನ ಅವಕಾಶದೊಂದಿಗೆ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಪ್ರತಿಯೊಬ್ಬ ವ್ಯಕ್ತಿಯು ಭ್ರಾತೃತ್ವವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನತೆ ಸಂವಿಧಾನವನ್ನು ಓದಲು ಉತ್ಸಾಹ ತೋರ್ಪಡಿಸದಿರುವುದು ಹಿನ್ನಡೆಯಾಗಿದ್ದು, ಸಂವಿಧಾನ ಓದದೇ ಹಕ್ಕುಗಳ ಪ್ರತಿಪಾದನೆ ಅಸಾಧ್ಯ ಎಂದು ಬಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಉಪನ್ಯಾಸಕ ಧನರಾಜ್ ದೊಡ್ಡನೇರಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಲಾ ಸಂಚಾಲಕ ವೇದಮೂರ್ತಿ ಎನ್.ಜನಾರ್ದನ ಭಟ್ ಸಂವಿಧಾನ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಶಾಲಾ ಹಿರಿಯ ಶಿಕ್ಷಕಿ ಸುಧಾ ನಾಗೇಶ್ ಸಂವಿಧಾನ ರಕ್ಷಣಾ ವಿಧಿ ಪ್ರತಿಜ್ಞಾ ಸ್ವೀಕಾರ ಬೋಧಿಸಿದರು. ಶಾಲಾ ನಾಯಕಿ ದಿಶಾ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಶಿಕ್ಷಕಿ ಪ್ರಜ್ಞಾ ಸಂವಿಧಾನ ಕುರಿತು ನಡೆಸಿದ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಾದ ಮಕ್ಕಳ ಪಟ್ಟಿಯನ್ನು ಓದಿದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣ ಸಂಯೋಜಕಿ ಸುಶೀಲಾ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕ ಧನರಾಜ್ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕ ಭೋಜ ವಂದಿಸಿದರು. ಶಿಕ್ಷಕ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News