ಶಿವಸೇನೆ-ಎನ್‌ಸಿಪಿ- ಕಾಂಗ್ರೆಸ್ ಮೈತ್ರಿಕೂಟದ ನಾಯಕರಾಗಿ ಉದ್ಧವ್ ಠಾಕ್ರೆ ಆಯ್ಕೆಗೆ ನಿರ್ಧಾರ

Update: 2019-11-26 14:32 GMT

ಮುಂಬೈ, ನ.26: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ ಬಳಿಕ ಬದಲಾಗಿರುವ ರಾಜಕೀಯ ಸನ್ನಿವೇಶದಲ್ಲಿ ಸರಕಾರ ರಚನೆಗೆ ಮುಂದಾಗಿರುವ ಶಿವಸೇನೆ-ಎನ್‌ಸಿಪಿ ಕಾಂಗ್ರೆಸ್ ಮೈತ್ರಿಕೂಟದ ನಾಯಕರಾಗಿ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಆಯ್ಕೆಯಾಗಲಿದ್ದಾರೆ ಎಂದು ಶಿವಸೇನೆಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

   ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವಿನ ಬಹುತೇಕ ಸಮಸ್ಯೆಗಳು ಬಗೆಹರಿದಿವೆ. ಆದ್ದರಿಂದ ಸರಕಾರ ರಚನೆಗೆ ಅವಕಾಶ ಕೋರಲು ಇನ್ನಷ್ಟು ಸಮಯದ ಅಗತ್ಯವಿಲ್ಲ. ಎರಡನೆಯ ಅತೀ ದೊಡ್ಡ ಪಕ್ಷವಾಗಿರುವ ಶಿವಸೇನೆಯನ್ನು ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನಿಸಬೇಕು . ಶಿವಸೇನೆ-ಎನ್‌ಸಿಪಿ- ಕಾಂಗ್ರೆಸ್‌ನ ಜಂಟಿ ಹೇಳಿಕೆಯನ್ನು ರಾಜ್ಯಪಾಲರು ಕೇಳಬಹುದು ಎಂದವರು ಹೇಳಿದ್ದಾರೆ. ಶಿವಸೇನೆಯ 56 ಶಾಸಕರು, ಎನ್‌ಸಿಪಿಯ 54 ಮತ್ತು ಕಾಂಗ್ರೆಸ್‌ನ 44 ಶಾಸಕರು ಸೇರಿ ಮೈತ್ರಿಕೂಟದ ಬಲ 154 ಆಗುತ್ತದೆ. 288 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಸಂಖ್ಯಾಬಲದ ಅಗತ್ಯವಿದೆ.

ದೇವೇಂದ್ರ ಫಡ್ನವೀಸ್ ರಾಜೀನಾಮೆ ಘೋಷಿಸಿರುವ ಕಾರಣ ಸುಪ್ರೀಂಕೋರ್ಟ್ ಆದೇಶದಂತೆ ಬುಧವಾರ ಸದನದಲ್ಲಿ ವಿಶ್ವಾಸಮತ ಯಾಚನೆಯ ಪ್ರಶ್ನೆ ಬರುವುದಿಲ್ಲ ಎಂದು ವಿಧಾನಸಭೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಅದರ ಬದಲು ಎರಡನೇ ಅತೀ ದೊಡ್ಡ ಪಕ್ಷವಾಗಿರುವ ಶಿವಸೇನೆಯನ್ನು ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನಿಸಬಹುದು ಎಂದವರು ಹೇಳಿದ್ದಾರೆ.

ಶನಿವಾರ ಬಿಜೆಪಿಯ ಜತೆ ಕೈಜೋಡಿಸಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಎನ್‌ಸಿಪಿಯ ಮುಖಂಡ ಅಜಿತ್ ಪವಾರ್ ಮಂಗಳವಾರ ‘ವೈಯಕ್ತಿಕ ಕಾರಣ’ ನೀಡಿ ಹುದ್ದೆಗೆ ರಾಜೀನಾಮೆ ನೀಡಿದರೆ, ಬಿಜೆಪಿಗೆ ಬಹುಮತವಿಲ್ಲದ ಕಾರಣ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ದೇವೇಂದ್ರ ಫಡ್ನವೀಸ್ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News