×
Ad

ತಲಪಾಡಿ ಟೋಲ್ ಗೇಟ್ ಬಳಿ ಪ್ರತಿಭಟನಾ ಸಭೆ

Update: 2019-11-26 19:58 IST

ಮಂಗಳೂರು : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಿಗುವ ಸುಂಕ ವಸೂಲಾತಿಗೆ ಡಿಸೆಂಬರ್ ಒಂದರಿಂದ ಫಾಸ್ಟ್ ಟ್ಯಾಗ್ ಪದ್ದತಿ ಅಳವಡಿಸುವುದನ್ನು ವಿರೋಧಿಸಿ ಮಂಗಳವಾರ ತಾಲೂಕು ಪಂಚಾಯಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ ನೇತೃತ್ವದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಲಪಾಡಿ ಟೋಲ್ ಗೇಟ್ ಬಳಿ ಪ್ರತಿಭಟನಾ ಸಭೆ ನಡೆಯಿತು.

ಸಭೆಯಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ಫಾಸ್ಟ್ ಟ್ಯಾಗ್ ವ್ಯವಸ್ಥೆ ಮಾಡುವ ಮೊದಲು ರಾಷ್ಟ್ರೀಯ ಹೆದ್ದಾರಿ ಸರಿಪಡಿಸಬೇಕಿದ್ದು ಈ ಬಗ್ಗೆ ಸಂಸದರು ಗಮನ ಹರಿಸಬೇಕಿತ್ತು.

ಎಂದಾದರೊಮ್ಮೆ ಕಾರಿನಲ್ಲಿ ಬರುವರು ಫಾಸ್ಟ್ ಟ್ಯಾಗ್ ಅಳವಡಿಸದಿದ್ದರೆ ದುಪ್ಪಟ್ಟು ಹಣ ವಸೂಲು ಮಾಡುತ್ತಾರೆ. ಈ ಕಾರಣಕ್ಕೆ ಇಲ್ಲಿಗೆ ನೂತನ ವ್ಯವಸ್ಥೆ ಅನಿವಾರ್ಯವಲ್ಲ. ಸ್ಥಳೀಯರಿಗೆ ವಿಶೇಷ ರಿಯಾಯಿತಿ ನೀಡಬೇಕು. ಇದಕ್ಕೂ ಮೀರಿ ವ್ಯವಸ್ಥೆ ಜಾರಿಗೆ ತಂದದ್ದೇ ಆದಲ್ಲಿ ರಾಜಕೀಯರಹಿತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಪಂ. ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ, ಪಂಪ್ ಮೇಲ್ಸೇತುವೆ ಹಲವಾರು ವರ್ಷಗಳಿಂದ ಪೂರ್ತಿ ಗೊಳಿಸುವಲ್ಲಿ ನವಯುಗ ಸಂಸ್ಥೆ ವಿಫಲವಾಗಿದೆ. ಹಿಂದಿನ ಉಸ್ತುವಾರಿ ಸಚಿವರು ಇದ್ದಾಗ ಸ್ಥಳೀಯರಿಗೆ ಸುಂಕ ರಿಯಾಯಿತಿ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು, ಆದರೆ ಈಗ ಏಕಾಏಕಿ ಫಾಸ್ಟ್ ಟ್ಯಾಗ್ ಜಾರಿಗೆ ತರಲಾಗುತ್ತಿದೆ. ಇದರಿಂದಾಗಿ ದಿನಕ್ಕೆ ಐದು ಬಾರಿ ನಮಾಝ್ ಗೆ ಹೋಗುವವರು, ದೇವಸ್ಥಾನಕ್ಕೆ ಪೂಜೆ ಮಾಡಲು ಹೋಗುವ ಅರ್ಚಕರು ದಿನಕ್ಕೆ ನಾಲ್ಕೈದು ಬಾರಿ ತೆರಿಗೆ ಕಟ್ಟಬೇಕಾಗುತ್ತದೆ. ಸ್ಥಳೀಯರಿಗೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಬೇಕು, ಈ ಬಗ್ಗೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು, ಸಂಸದರು ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಎಚ್ಚರಿಸಿದರು. ‌

ಗಡಿನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿ, ಫಾಸ್ಟ್ ಟ್ಯಾಗ್ ಹೆಸರಲ್ಲಿ ಬಸ್ಸುಗಳು ಟಿಕೆಟ್ ದರ ಹೆಚ್ಚಳ ಮಾಡಿದರೆ ನಾವು ಬಿಡುವುದಿಲ್ಲ, ಈ ವ್ಯವಸ್ಥೆ ಜಾರಿಗೆ ಬಂದರೆ ಸ್ಥಳೀಯರು ಕೆಲಸ‌ ಕಳೆದುಕೊಳ್ಳಲಿದ್ದಾರೆ. ಡಿಸೆಂಬರ್ ಒಂದರಿಂದ ಫಾಸ್ಟ್ ಟ್ಯಾಗ್ ಮಾತ್ರವಲ್ಲ, ಟೋಲ್ ಗೇಟೇ ಇರದು ಎಂದು ಎಚ್ಚರಿಸಿದರು.

ತಾಲೂಕು ಪಂ. ಸದಸ್ಯರಾದ ಪದ್ಮಾವತಿ, ಸುರೇಖ ಚಂದ್ರಹಾಸ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಉಮ್ಮರ್ ಪಜೀರ್, ಬ್ಲಾಕ್ ಕಾಂಗ್ರೆಸ್ ಕೋಟೆಕಾರ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅಹ್ಮದ್ ಜಮಾಲ್ ಅಜ್ಜಿನಡ್ಕ, ಮುಖಂಡರಾದ ರಿಯಾಝ್ ಮಲಾರ್, ಸುನಿತಾ ಲೋಬೋ, ಅಬ್ದುಲ್ ಖಾದರ್, ಚಾಂದಿನಿ ಹರೀಶ್, ಹೇಮ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News