×
Ad

ದೇಶ ಆಳುವವರಿಂದ ಸಂವಿಧಾನಕ್ಕೆ ಆಪತ್ತು: ಡಾ.ಪಿ.ಎಲ್.ಧರ್ಮ

Update: 2019-11-26 20:28 IST

 ಉಡುಪಿ, ನ.26: ಈ ದೇಶದ ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲ ಹಂತ ಗಳಲ್ಲೂ ಸಂವಿಧಾನವನ್ನು ಅಪಾರ್ಥ ಮಾಡುವ ಕಾರ್ಯ ನಡೆಯುತ್ತಿದೆ. ಕರ್ತವ್ಯ ಪ್ರಜ್ಞೆ ಇಲ್ಲದ ನಮ್ಮನ್ನು ಆಳುವ ರಾಜಕಾರಣಿಗಳಿಂದ ದೇಶದ ಸಂವಿಧಾನಕ್ಕೆ ಇಂದು ಆಪತ್ತು ಬಂದೊದಗಿದೆ. ಅದಕ್ಕಾಗಿ ಸಂವಿಧಾನವನ್ನು ಕಾಪಾಡುವ ಹೊಸ ಜನಾಂಗ ಹಾಗೂ ನಾಯಕರುಗಳನ್ನು ಸೃಷ್ಠಿ ಮಾಡುವ ಕೆಲಸ ಅಗತ್ಯವಾಗಿ ನಡೆಯಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಜಕೀಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಕಲಾ ವಿಭಾಗದ ಡೀನ್ ಡಾ.ಪಿ.ಎಲ್.ಧರ್ಮ ಹೇಳಿದ್ದಾರೆ.

ಉಡುಪಿ ವಕೀಲರ ಸಂಘ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಡುಪಿ ನ್ಯಾಯಾಲಯ ಸಂಕೀರ್ಣ ದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾದ ಸಂವಿಧಾನ ದಿನಾಚರಣೆಯಲ್ಲಿ ಅವರು ದಿಕ್ಸೂಚಿ ಭಾಷಣದಲ್ಲಿ ಮಾತನಾಡುತಿದ್ದರು.

ಇಂದು ಆಳುವ ವರ್ಗದವರು ಸಂವಿಧಾನ ಹಾಗೂ ಕಾನೂನುಗಳನ್ನು ಮರೆ ಮಾಚಲು ಆ ಬಗ್ಗೆ ಯಾವುದೇ ಚರ್ಚೆಗಳನ್ನು ಮಾಡುತ್ತಿಲ್ಲ. ಅವರು ನಮ್ಮ ಜೊತೆ ಮಾತನಾಡುತ್ತಾರೆಯೇ ಹೊರತು ನಮ್ಮ ಪ್ರತಿಕ್ರಿಯೆಗಳನ್ನು ಅವರು ಸ್ವೀಕರಿಸುತ್ತಿಲ್ಲ. ಸಂವಿಧಾನವನ್ನು ಪ್ರತಿಯೊಬ್ಬರು ತಮ್ಮ ತಮ್ಮ ಮೂಗಿನ ನೇರಕ್ಕೆ ನೋಡುವ ಪ್ರಯತ್ನ ಹಾಗೂ ಹೊಸ ಸಂಸ್ಕೃತಿ ಈ ದೇಶದಲ್ಲಿ ಪ್ರಾರಂಭವಾಗಿದೆ. ಆದುದರಿಂದ ಸಂವಿಧಾನ ಇಂದು ಸಂಕೀರ್ಣ ಆಗುತ್ತಿದೆ ಎಂದರು.

ಸಂವಿಧಾನವನ್ನು ಸರಿಯಾಗಿ ಓದಿ, ಅರ್ಥ ಮಾಡಿಕೊಳ್ಳದಿದ್ದರೆ ನಾವು ದಾರಿ ತಪ್ಪುದಲ್ಲದೆ, ಮುಂದಿನ ಪೀಳಿಗೆಯನ್ನು ಕೂಡ ದಾರಿ ತಪ್ಪುವಂತೆ ಮಾಡುತ್ತೇವೆ. ಸಂವಿಧಾನ ಪ್ರತಿಯೊಬ್ಬರು ಓದಿ, ಹೃದಯದಲ್ಲಿರಿಸಿ ಅದನ್ನು ಜಾರಿಗೆ ತಂದಿದ್ದರೆ ಈ ದೇಶ ಇನ್ನು ಹೆಚ್ಚು ಮಾದರಿಯಾಗಿರುತ್ತಿತ್ತು. ಆದರೆ ನಾವು ಸಂವಿಧಾನವನ್ನು ದೂರ ಇಟ್ಟಿದ್ದೇವೆ. ನಮಗೆ ಸಂವಿಧಾನಕ್ಕಿಂತ ಖಾಸಗಿ ಬದುಕು, ಜಾತಿ, ಧರ್ಮ ಮುಖ್ಯವಾಗಿದೆ. ಆದುದರಿಂದ ಈ ದೇಶದಲ್ಲಿ ಆಗಬೇಕಾಗಿರುವುದು ನಮ್ಮ ನಡವಳಿಕೆಯ ಪರಿವರ್ತನೆ. ಇಲ್ಲದಿದ್ದರೆ ಈ ದೇಶದ ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುತ್ತದೆ ಎಂದು ಅವರು ತಿಳಿಸಿದರು.

ಈ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿರುವುದರಿಂದ ಸಂವಿಧಾನವನ್ನು ಉಳಿಸುವ ಬಹಳ ದೊಡ್ಡ ಜವಾಬ್ದಾರಿ ನಮ್ಮ ಮುಂದಿದೆ. ಸಂವಿಧಾನ ಈಗ ಅನುಷ್ಠಾನ ಗೊಂಡಿದೆಯೇ ಹೊರತು ತಾರ್ಕಿಕ ಅಂತ್ಯ ತಲುಪಿಲ್ಲ. ಆ ಕಾರ್ಯ ಯುವ ಕಾನೂನು ರಕ್ಷಕರು ಹಾಗೂ ಕಾನೂನು ವಿದ್ಯಾಲಯಗಳಿಂದ ಆಗಬೇಕಾಗಿದೆ. ಸಾಮಾಜಿಕ ಕ್ರಾಂತಿಯಂತೆ ಸಂವಿಧಾನವನ್ನು ಪ್ರತಿಯೊಬ್ಬರಿಗೆ ಹೇಳಿಕೊಡಬೇಕಾ ಗಿದೆ. ಎಲ್ಲ ಧರ್ಮಗಳ ಅಂಶಗಳನ್ನು ಕ್ರೋಢಿಕರಿಸಿ ರಚಿಸಿರುವ ಮತ್ತು ಎಲ್ಲರನ್ನು ಸಮಾನವಾಗಿ, ನಾಗರಿಕರನ್ನಾಗಿ ಕಾಣುವ ಭಾರತದ ಸಂವಿಧಾನವೇ ಅತ್ಯಂತ ಪವಿತ್ರವಾದ ಗ್ರಂಥ. ಇದರ ಒಳಗೆ ಎಲ್ಲ ಧರ್ಮ, ಜಾತಿಯವರು ಇದ್ದಾೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ಮಾತನಾಡಿ, ಭಾರತದ ಸಂವಿಧಾನ ಜಗತ್ತಿನ ಅತೀ ದೊಡ್ಡ ಸಂವಿಧಾನವಾಗಿದೆ. ಬೇರೆ ಯಾವ ದೇಶದಲ್ಲೂ ಇಷ್ಟು ದೊಡ್ಡ ಸಂವಿಧಾನ ಇಲ್ಲ. ದೇಶದ ಎಲ್ಲ ಆಗುಹೋಗುಗಳು, ಕಾನೂನುಗಳು ಸಂವಿಧಾನಕ್ಕೆ ಅನು ಗುಣವಾಗಿರಬೇಕು. ಸಂವಿಧಾನಕ್ಕೆ ವಿರುದ್ಧವಾಗಿ ಕಾನೂನುಗಳು ಸೃಷ್ಟಿಯಾದಾಗ ಅದನ್ನು ನ್ಯಾಯಾಲಯಗಳು ಹೊಡೆದು ಹಾಕಿವೆ ಎಂದರು.

ಸಂವಿಧಾನವು ಆಧುನಿಕ ಭಾರತದ ಜೀವಾಳ. ಇದರ ಆಶೋತ್ತರಗಳನ್ನು ಅರ್ಥಮಾಡಿಕೊಂಡು ಮುನ್ನಡೆಯುವುದು ನಮ್ಮ ಕರ್ತವ್ಯವಾಗಿದೆ. ಭಾರತದ ಸಂವಿಧಾನಕ್ಕೆ 70 ವರ್ಷಗಳಾದರೂ ಅದರಲ್ಲಿ ಹೇಳಿರುವ ಅನೇಕ ಸಂಗತಿಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದುದರಿಂದ ಈ ಬಗ್ಗೆ ಪುನರಾವಲೋಕನ ಮಾಡುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.

ಉಡುಪಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ವಿವೇಕಾನಂದ ಪಂಡಿತ್ ಸಂವಿಧಾನದ ಪೀಠಿಕೆಯ ಉದ್ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಸ್ವಾಗತಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ನ್ಯಾಯವಾದಿ ಅಶೀದುಲ್ಲಾ ಕಟಪಾಡಿ ಪರಿಚಯ ಮಾಡಿದರು. ಲೋಕಾಯುಕ್ತ ವಿಶೇಷ ಅಭಿಯೋಜಕ ವಿಜಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಮಸ್ಯೆಗಳಿಗಿಂತ ಅಯೋಧ್ಯೆ ತೀರ್ಪು ಮುಖ್ಯವಾಗಿತ್ತು !

ಧರ್ಮ ಎಂಬುದು ಖಾಸಗಿ ವಸ್ತುಗಳು. ಸಾರ್ವಜನಿಕ ಬದುಕಿಗೆ ಬಂದಾಗ ನಾವೆಲ್ಲರು ಭಾರತೀಯ ನಾಗರಿಕರಾಗಿರುತ್ತೇವೆ. ಆದುದರಿಂದ ನಾಗರಿಕ ಎಂಬುದು ಈ ದೇಶ ಸಂವಿಧಾನ ನೀಡಿರುವ ಅತ್ಯಂತ ಗೌರವಯುತವಾದ ಗುರುತು ಆಗಿದೆ. ಖಾಸಗಿ ಬದುಕು ಹಾಗೂ ಸಾರ್ವಜನಿಕ ಬದುಕು ಬೇರೆ ಬೇರೆಯಾಗಿದೆ. ಖಾಸಗಿ ಬದುಕು ಸಾರ್ವಜನಿಕವಾಗಿ ಬಂದ ಪರಿಣಾಮ ಈ ದೇಶ ಸಾಕಷ್ಟು ದುರಂತಗಳನ್ನು ಅನುಭವಿಸಿದೆ ಎಂದು ಡಾ.ಪಿ.ಎಲ್.ಧರ್ಮ ತಿಳಿಸಿದರು.

ಅಯೋಧ್ಯೆ ತೀರ್ಪಿಗಾಗಿ ನಾವು ಗಂಭೀರವಾಗಿ ಅಂಟಿಕೊಂಡಿದ್ದೇವು. ಆದರೆ ಈ ದೇಶದಲ್ಲಿ ಇನ್ನು ಬಡತನ ಇರುವುದು, ಸಾಮಾಜಿಕ ನ್ಯಾಯ ದೊರೆಯ ದಿರುವುದು, ನಿರುದ್ಯೋಗ, ಆರೋಗ್ಯದ ಸಮಸ್ಯೆ, ಕಾನೂನು ನ್ಯಾಯ ಸಿಗದಿ ರುವ ಬಗ್ಗೆ ನಾವು ಯಾರು ಮಾತನಾಡುತ್ತಿಲ್ಲ. ಇಡೀ ದೇಶವು ಖಾಸಗಿ ಸೊತ್ತು ಆಗಿರುವ ಧರ್ಮಕ್ಕೆ ಸಂಬಂಧಪಟ್ಟ ವಿಷಯವನ್ನೇ ಮುಖ್ಯ ವಾಗಿಸಿಕೊಂಡಿದೆ. ಆದುದರಿಂದ ಮುಂದಿನ ಪೀಳಿಗೆಯನ್ನು ನಾವೆಲ್ಲ ಭಾರತೀಯ ನಾಗರಿಕರು ಎಂಬ ರೀತಿಯಲ್ಲಿ ಬದುಕುವಂತೆ ಮಾಡುವ ಪ್ರಮುಖ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News