ಮಹಾರಾಷ್ಟ್ರ ವಿಧಾನಸಭೆ: ಬುಧವಾರ ಹಂಗಾಮಿ ಸ್ಪೀಕರ್ ಕೋಳಂಬಕರರಿಂದ ಶಾಸಕರಿಗೆ ಪ್ರಮಾಣ ವಚನ ಬೋಧನೆ
ಮುಂಬೈ, ನ.26: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ವಿಶ್ವಾಸ ಮತ ಯಾಚನೆಗಾಗಿ ಬುಧವಾರ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದಿದ್ದಾರೆ. ಬೆಳಿಗ್ಗೆ ಎಂಟು ಗಂಟೆಗೆ ಆರಂಭಗೊಳ್ಳುವ ಅಧಿವೇಶನದ ಮೊದಲ ಕಲಾಪವಾಗಿ ಹಂಗಾಮಿ ಸ್ಪೀಕರ್ ಕಾಳಿದಾಸ ಕೋಳಂಬಕರ ಅವರು ನೂತನವಾಗಿ ಆಯ್ಕೆಯಾಗಿರುವ 288 ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಬುಧವಾರ ಬಲಾಬಲ ಪರೀಕ್ಷೆಗೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶದಂತೆ ಕೋಶಿಯಾರಿ ಅವರು ಮಂಗಳವಾರ ಸಂಜೆ ಹಂಗಾಮಿ ಸ್ಪೀಕರ್ ಆಗಿ ಕೋಳಂಬಕರ ಅವರನ್ನು ನೇಮಕಗೊಳಿಸಿದ್ದಾರೆ.
ರಾಜ್ಯದಲ್ಲಿಯ ರಾಜಕೀಯ ಏಳುಬೀಳುಗಳಿಂದಾಗಿ ಚುನಾವಣಾ ಫಲಿತಾಂಶ ಪ್ರಕಟಗೊಂಡು ಒಂದು ತಿಂಗಳು ಗತಿಸಿದ್ದರೂ ಪ್ರಮಾಣ ವಚನ ಸ್ವೀಕರಿಸಲು ನೂತನ ಶಾಸಕರಿಗೆ ಸಾಧ್ಯವಾಗಿರಲಿಲ್ಲ. ಯಾವುದೇ ಪಕ್ಷಕ್ಕೆ ಸರಕಾರ ರಚನೆ ಸಾಧ್ಯವಾಗಿರದ ಹಿನ್ನೆಲೆಯಲ್ಲಿ ವಿಧಾನಸಭೆಯನ್ನು ಅಮಾನತುಗೊಳಿಸಲಾಗಿತ್ತು ಮತ್ತು ನ.12ರಿಂದ ನ.23ರವರೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು.
ಬುಧವಾರ ಸಂಜೆ ಫಡ್ನವೀಸ್ ಸರಕಾರದ ವಿಶ್ವಾಸ ಮತ ಯಾಚನೆಗೆ ಮಂಗಳವಾರ ಆದೇಶಿಸಿದ್ದ ಸರ್ವೋಚ್ಚ ನ್ಯಾಯಾಲಯವು ಹಂಗಾಮಿ ಸ್ಪೀಕರ್ ಅನ್ನು ನೇಮಿಸುವಂತೆ ಮತ್ತು ಎಲ್ಲ ಶಾಸಕರು ಅಂದು ಸಂಜೆ ಐದು ಗಂಟೆಯೊಳಗೆ ಪ್ರಮಾಣ ವಚನವನ್ನು ಸ್ವೀಕರಿಸುವಂತೆ ನೋಡಿಕೊಳ್ಳಲು ರಾಜ್ಯಪಾಲರಿಗೆ ಸೂಚಿಸಿತ್ತು.