ಪುತ್ತೂರು : ದುಷ್ಕರ್ಮಿಗಳ ತಂಡದಿಂದ ಯುವಕನ ಮೇಲೆ ಗುಂಡಿನ ದಾಳಿ
ಮಂಗಳೂರು, ನ. 26: ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯುವಕನಿಗೆ ರಿವಾಲ್ವಾರ್‌ನಿಂದ ಗುಂಡು ಹಾರಿಸಿದ ಘಟನೆ ಕಬಕ ಸಮೀಪದ ಕಲ್ಲಂದಡ್ಕದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಕಲ್ಲಂದಡ್ಕ ನಿವಾಸಿ ಅಬ್ದುಲ್ ಖಾದರ್ (36) ಗುಂಡಿನ ದಾಳಿಗೊಳಗಾದ ಗಾಯಾಳು. ಬ್ಲೇಡ್ ಸಾದಿಕ್ (35) ಎಂಬಾತ ಶೂಟೌಟ್ ನಡೆಸಿದ ಆರೋಪಿ ಎಂದು ದೂರಲಾಗಿದೆ.
ಘಟನೆ ವಿವರ: ಗಾಯಾಳು ಅಬ್ದುಲ್ ಖಾದರ್ ಕಬಕ ಪಟ್ಟಣದಿಂದ ತನ್ನ ಮನೆಯಾದ ಕಲ್ಲಂದಡ್ಕ ನಿವಾಸಕ್ಕೆ ಸಂಜೆ 6:15ಕ್ಕೆ ಬಂದಿದ್ದು, ಈ ವೇಳೆ ನಾಲ್ವರು ದುಷ್ಕರ್ಮಿಗಳಿದ್ದ ಕಾರೊಂದು ಅಬ್ದುಲ್ ಖಾದರ್ ಮನೆ ಎದುರು ಬಂದು ರಿವಾಲ್ವಾರ್‌ನಿಂದ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಮೊದಲ ಗುಂಡು ಎದೆಯ ಎಡಭಾಗಕ್ಕೆ ನುಗ್ಗಿದ್ದು, ಎರಡನೇ ಗುಂಡು ಬಲಗಣ್ಣಿನ ರೆಪ್ಪೆಗೆ ತಾಗಿದೆ.
ಶೌಟೌಟ್ ನಡೆಸಿದ ತಕ್ಷಣವೇ ದುಷ್ಕರ್ಮಿಗಳು ಕಾರನ್ನು ವೇಗವಾಗಿ ಚಲಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದು, ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಖಾದರ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಹಳೆ ವೈಷಮ್ಯವೇ ಕಾರಣ ಎಂದು ತಿಳಿದುಬಂದಿದೆ.
ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೆ ವೈಷಮ್ಯ ಕಾರಣ: ಗಾಯಾಳು ಸಹೋದರ
ಎರಡು ವರ್ಷದ ಹಿಂದೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಸಹೋದರನ ಮೇಲೆ ಬ್ಲೇಡ್ ಸಾದಿಕ್‌ಗೆ ಸೂಪಾರಿ ಕೊಡಲಾಗಿತ್ತು. ಈ ವೇಳೆ ಗಂಭೀರ ಹಲ್ಲೆ ಕೂಡ ನಡೆಸಲಾಗಿತ್ತು. ಆ ಘಟನೆಯಲ್ಲಿ ಭಾಗಿಯಾದ ಆರೋಪಿಗಳ ಬಂಧನಕ್ಕೆ ಸಹೋದರ ಸಹಕರಿಸಿದ್ದು, ಹಳೆ ವೈಷಮ್ಯದಿಂದಲೇ ಮಂಗಳವಾರ ಸಂಜೆ ಸಹೋದರನ ಮೇಲೆ ಗುಂಡು ಹಾರಿಸಲಾಗಿದೆ ಎಂದು ಗುಂಡಿನ ದಾಳಿಯಲ್ಲಿ ಗಾಯಗೊಂಡ ಅಬ್ದುಲ್ ಖಾದರ್‌ನ ಸಹೋದರ ಅಬೂಬಕರ್ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.
ಅಬ್ದುಲ್ ಖಾದರ್ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿದೆ. ಖಾದರ್ ಸ್ಥಿತಿ ಗಂಭೀರವಾಗಿದೆ. ಮನೆಯವರು ಆತಂಕಗೊಂಡಿದ್ದಾರೆ. ಶಸ್ತ್ರಚಿಕಿತ್ಸೆ ನಡೆಯುತ್ತಿದೆ.
- ಉಮರ್ ಫಾರೂಕ್, ಗಾಯಾಳು ಸ್ನೇಹಿತ