ಕನ್ನಡ ನಾಡುನುಡಿಗೆ ಪ್ರೋತ್ಸಾಹ ನೀಡಲು ಸರಕಾರ ಬದ್ಧ: ಲಾಲಾಜಿ
ಶಿರ್ವ, ನ.26: ಸಾಹಿತ್ಯವೆಂಬುದು ಎಲ್ಲರನ್ನೂ ಒಳಗೊಳ್ಳಿಸುವ ವಿಷಯ ವಾಗಿದ್ದು, ಕನ್ನಡ ನಾಡು-ನುಡಿ, ಸಾಹಿತ್ಯ ಸಂಸ್ಕೃತಿಗೆ ರಾಜ್ಯ ಸರಕಾರದ ಸಂಪೂರ್ಣ ಪ್ರೋತ್ಸಾಹ ನೀಡಲಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದ್ದಾರೆ.
ಕಾಪು ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಮೂಡುಬೆಳ್ಳೆಯ ಕಾರ್ಯಾಲಯವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬೆಳ್ಳೆ ಚರ್ಚ್ ಪ್ರಧಾನ ಧರ್ಮಗುರು ರೆ.ಫಾ.ಕ್ಲೆಮೆಂಟ್ ಮಸ್ಕರೇನಸ್ ಮಾತನಾಡಿ, ಸಮ್ಮೇಳನಕ್ಕೆ ಚರ್ಚ್ ವತಿಯಿಂದ ಸಭಾಂಗಣ ಸಹಿತ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಸಾಹಿತ್ಯಕ್ಕೆ ಜಾತಿ, ಮತದ ಯಾವುದೇ ಮೇರೆಗಳು ಇಲ್ಲ. ನಾವೆಲ್ಲ ಒಗ್ಗಟ್ಟಾಗಿ ಸಮ್ಮೇಳನವನ್ನು ಸಂಘಟಿಸಬೇಕು ಎಂದು ಹೇಳಿದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಶಿವರಾಮ ಕಾರಂತರ ಹೆಸರಿನಲ್ಲಿ ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಇದಕ್ಕೆ ಶಾಸಕರ ಮೂಲಕ ಸರಕಾರದ ಸಂಪೂರ್ಣ ಸಹಕಾರ ನೀಡಬೇಕು. ತಾಲೂಕು ಮಟ್ಟದಲ್ಲಿ ಜರಗುವ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾ ಸಮಿತಿಯಿಂದ ಸಂಪೂರ್ಣ ಸಹಕಾರ, ಮಾರ್ಗರ್ಶನ ನೀಡಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ರಂಜನಿ ಹೆಗ್ಡೆ, ತಾಪಂ ಸದಸ್ಯೆ ಸುಜಾತಾ ಸುವರ್ಣ, ಪೂರ್ವ ಸಮ್ಮೇಳನಾಧ್ಯಕ್ಷ ಮುದ್ದು ಮೂಡುಬೆಳ್ಳೆ, ಬೆಳ್ಳೆ ಗ್ರಾಪಂ ಉಪಾಧ್ಯಕ್ಷ ಹರೀಶ ಶೆಟ್ಟಿ ಬೆಳ್ಳೆ, ಪಿಡಿಒ ವಸಂತಿ ಬಾಯಿ, ವಿಎ ಪ್ರದೀಪ್ ಕುಮಾರ್, ಸಮಿತಿ ಉಪಾಧ್ಯಕ್ಷ ಪಿ.ಡಿ.ಕಾಮತ್, ಪ್ರಾಂಶುಪಾಲ ದೇವರಾಯ ಶಾನುಬೋಗ್, ಕಾರ್ಯದರ್ಶಿ ಗಳಾದ ರಮೇಶ್ ಪಡುಬೆಳ್ಳೆ, ಅಜಿತ್ ಕೋಟ್ಯಾನ್, ಶ್ರೀಕಾಂತ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮೇಳನದ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ಸ್ವಾಗತಿಸಿದರು. ಕಸಾಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಶಿವಾಜಿ ಎಸ್.ಸುವರ್ಣ ವಂದಿಸಿದರು.