ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯಿಂದ ‘ಅಸುವು ರಾಷ್ಟ್ರ ಸಮರ್ಪಿತ’
ಮಂಗಳೂರು, ನ.26: ಮುಂಬೈನಲ್ಲಿ ನಡೆದ ಉಗ್ರರ ದಾಳಿ ಹಿಮ್ಮೆಟ್ಟಿಸುವ ಕಾರ್ಯದಲ್ಲಿ ಪ್ರಾಣಾರ್ಪಣೆಗೈದ ವೀರಯೋಧರನ್ನು ಹಾಗೂ ದಾಳಿಯಲ್ಲಿ ಬಲಿಯಾದ ಅನಾಯಕರನ್ನು ಸ್ಮರಿಸಿ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯಿಂದ ನಗರದ ಕದ್ರಿ ಸ್ಮಾರಕ ಆವರಣದಲ್ಲಿ ಮಂಗಳವಾರ ಸಂಜೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಘಟನೆಯಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಸೈನಿಕ ಗುರು ಎಚ್. ವೀರಮರಣ ಹೊಂದಿದ್ದರು. ಅವರ ತಾಯಿ ಚಿಕ್ಕತಾಯಮ್ಮ, ತಂದೆ ಹೊನ್ನಯ್ಯ ಹಾಗೂ ಸಹೋದರ ಬಸವರಾಜ್ ದೀಪ ಪ್ರಜ್ವಲಿಸಿ ‘ಅಸುವು ರಾಷ್ಟ್ರ ಸಮರ್ಪಿತ’ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ, ಕದ್ರಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸುವ ಜತೆಗೆ ಅಶ್ರುತರ್ಪಣಗೈದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಗಡಿಯಲ್ಲಿ ಹಗಲು-ರಾತ್ರಿ ನಿಂತು ದೇಶದ ರಕ್ಷಣೆ ಮಾಡುತ್ತಿರುವ ಸೈನಿಕರನ್ನು ಪ್ರತಿದಿನ ನೆನೆಯಬೇಕು. ಮುಂಬೈಯ ತಾಜ್ ಹೊಟೇಲ್‌ನಲ್ಲಿ ಉಗ್ರರು ದಾಳಿ ನಡೆಸಿದಾಗ ಕೆಚ್ಚೆದೆಯಿಂದ ಹಿಮ್ಮೆಟ್ಟಿಸಿ ಹುತಾತ್ಮರಾದ ಧೀರರು ನಮ್ಮ ಸೈನಿಕರು. ಮೇಜರ್ ಉನ್ನಿಕೃಷ್ಣನ್ ಸಹಿತ ಹಲವರು ಪಾಣಾರ್ಪಣೆಗೈದಿದ್ದಾರೆ. ಸೈನಿಕರೇ ದೇಶದ ಶಕ್ತಿ ಎಂದರು.
ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಕರ್ನಲ್ ಗ್ರೆಸಿಯನ್ ಸಿಕ್ವೇರಾ, ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್.ಎಂ.ಐರನ್, ಸುನೀಲ್ ಆಚಾರ್, ಎಂಸಿಸಿ ಬ್ಯಾಂಕ್ ನಿರ್ದೇಶಕ ಅನಿಲ್ ಪಿ., ವಾಲಿಬಾಲ್ ಕ್ರೀಡಾಪಟು ನಾಗೇಶ್ ಎ., ಲ್ಯಾನಿ ಪಿಂಟೊ, ಯೋಗೀಶ್ ಆಚಾರ್, ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಈಜುಪಟು ಸಾನಿಯಾ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸಂಸ್ಥಾಪಕ ಪ್ರಾಂಕ್ಲಿನ್ ಮೊಂತೆರೊ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದೇರೆಬೈಲ್ ಚರ್ಚ್‌ನ ಗಾಯನ ಮಂಡಲ ವತಿಯಿಂದ ಪ್ರಾರ್ಥಿಸಲಾಯಿತು. ನಂದಿನಿ ಮತ್ತು ಭವ್ಯಾ ಕಾರ್ಯಕ್ರಮ ನಿರೂಪಿಸಿದರು.