ಮಂಗಳೂರು : ಅಕ್ರಮ ಮರಳು ಸಾಗಾಟ ; 379 ಪ್ರಕರಣ ದಾಖಲು, 40 ಲಕ್ಷ ಮೌಲ್ಯದ ಸೊತ್ತು ವಶ

Update: 2019-11-26 17:00 GMT

ಮಂಗಳೂರು, ನ. 26: ಕೇರಳ ಸೇರಿದಂತೆ ವಿವಿಧೆಡೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ದಕ್ಷಿಣ ಉಪವಿಭಾಗ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ 379 ಪ್ರಕರಣ ದಾಖಲಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ನ. 21ರಂದು ಮಧ್ಯಾಹ್ನ 2:30ರ ವೇಳೆಗೆ ಉಪನಿರೀಕ್ಷಕಿ ಜಾನಕಿ ಕೆ. ಅವರು ಸಿಬ್ಬಂದಿ ಯೊಂದಿಗೆ ಗಸ್ತಿನಲ್ಲಿದ್ದಾಗ ಆಡಂಕುದ್ರು ಕ್ರಾಸ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಟಿಪ್ಪರ್ ಲಾರಿಯೊಂದನ್ನು ತಡೆದು ನಿಲ್ಲಿಸಿದಾಗ ಚಾಲಕ ಲಾರಿ ನಿಲ್ಲಿಸಿ ಪರಾರಿಯಾಗಿದ್ದಾನೆ. ಅದನ್ನು ಪರಿಶೀಲನೆ ನಡೆಸಿದಾಗ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಮರಳು ಪತ್ತೆಯಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 6.06ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ನ.19ರಂದು ಬೆಳಗ್ಗೆ 7ಗಂಟೆಗೆ ಸಿಸಿಬಿ ಘಟಕದ ಸಹಾಯಕ ಪೊಲೀಸ್ ಉಪನಿರೀಕ್ಷಕ ಹರೀಶ್ ಅವರು ಇಲಾಖಾ ಜೀಪಿನಲ್ಲಿ ಗಸ್ತು ತಿರುಗುತ್ತಿದ್ದಾಗ ಬಜಾಲ್ ನೇತ್ರಾವತಿ ನದಿ ತಟದಲ್ಲಿ ಕಲಂದರ್ ಎಂಬಾತನು ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಅಕ್ರಮವಾಗಿ ಸಂಗ್ರಹ ಮಾಡಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜ.23ರಂದು ಬೆಳಗ್ಗೆ 9:45ಕ್ಕೆ ಠಾಣಾ ನಿರೀಕ್ಷಕ ಗೋಪಿಕೃಷ್ಣ ಮತ್ತು ಸಿಬ್ಬಂದಿ ಚೇತನ್ ಅವರು ವಾಹನ ತಪಾಸಣೆ ಮಾಡುತ್ತಿದ್ದಾಗ ಚೆಂಬುಗುಡ್ಡೆ ಬಳಿ ಟಿಪ್ಪರ್ ಲಾರಿಯೊಂದನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ. ಬಳಿಕ ಲಾರಿಯನ್ನು ತಪಾಸಣೆ ನಡೆಸಿದಾಗ ಅಕ್ರಮವಾಗಿ ಮರಳು ಸಾಗಾಟ ಮಾಡಿರುವುದು ಪತ್ತೆಯಾಗಿದೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 5.04ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ನ.21ರಂದು ರಾತ್ರಿ 11ಗಂಟೆಯ ಸುಮಾರಿಗೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಗಸ್ತಿನಲ್ಲಿದ್ದಾಗ ಅರ್ಕುಳ ಜಂಕ್ಷನ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭ ಅರ್ಕುಳ ಮರಳು ಧಕ್ಕೆಯ ಕಡೆಯಿಂದ ಟಿಪ್ಪರ್ ಹಾಗೂ ಚಿಕ್ಕ ಲಾರಿ ಬರುತ್ತಿದ್ದು, ವಾಹನಗಳನ್ನು ನಿಲ್ಲಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಪರಿಶೀಲಿಸಿದಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಸುಮಾರು 15 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ನೆತ್ತಿಲಪದವು ಎಂಬಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪದಡಿ ಪೊಲೀಸರು ದಾಳಿ ನಡೆಸಿ ಟಿಪ್ಪರ್ ಲಾರಿ ವಶಪಡಿಸಿಕೊಂಡಿದ್ದಾರೆ.

 ನ.11ರಂದು ನೆತ್ತಿಲಪದವು ಬಳಿ ಅಡ್ಕಾರ್‌ನಿಂದ ಮರಳನ್ನು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು 13.20 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News