ಬಿಜೆಪಿಯ ಆಟ ಮುಗಿಯಿತು: ಪ್ರತಿಪಕ್ಷ
ಹೊಸದಿಲ್ಲಿ, ನ. 26: ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ನೀಡಿದ ತೀರ್ಪು ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಎನ್‌ಸಿಪಿ ನಾಯಕ ನವಾಬ್ ಮಲಿಕ್, ‘‘ಸುಪ್ರೀಂ ಕೋರ್ಟ್ ಇಂದು ನೀಡಿದ ತೀರ್ಪು ಭಾರತದ ಪ್ರಜಾಪ್ರಭುತ್ವದ ಮೈಲಿಗಲ್ಲು. ನಾಳೆ ಸಂಜೆ 5 ಗಂಟೆ ಒಳಗೆ ಬಿಜೆಪಿಯ ಆಟ ಮುಗಿಯಲಿದೆ. ಇನ್ನು ಕೆಲವು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್‌ಸಿಪಿ- ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರಲಿದೆ’’ ಎಂದಿದ್ದಾರೆ.
‘‘ಸತ್ಯಮೇವ ಜಯತೆ, ಬಿಜೆಪಿಯ ಆಟ ಮುಗಿಯಿತು’’ ಎಂದು ಮಲಿಕ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಹಾರಾಷ್ಟ್ರದಲ್ಲಿ 24 ಗಂಟೆಯೊಳಗೆ ಅಥವಾ ಬುಧವಾರದ ಒಳಗೆ ಬಹುಮತ ಸಾಬೀತುಪಡಿಸಬೇಕೆನ್ನುವ ಸುಪ್ರೀಂ ಕೋರ್ಟ್‌ನ ಆದೇಶವನ್ನು ಸ್ವಾಗತಿಸುತ್ತೇನೆ. ‘‘ನಾವು ಬಹುಮತ ಸಾಬೀತುಪಡಿಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.
‘‘ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಸಾಂವಿಧಾನಿಕ ಸಿದ್ಧಾಂತಗಳನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌ಗೆ ನಾನು ಚಿರಋಣಿ. ಸಂವಿಧಾನದ ದಿನವಾದ ಇಂದು ಮಹಾರಾಷ್ಟ್ರದ ಕುರಿತು ಈ ತೀರ್ಪು ಬಂದಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂದ ಗೌರವ’’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದರು.
‘‘ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ. ನ್ಯಾಯಾಲಯ 30 ಗಂಟೆಗಳ ಕಾಲಾವಕಾಶ ನೀಡಿದೆ. ನಾವು 30 ನಿಮಿಷಗಳಲ್ಲಿ ಬಹುಮತ ಸಾಬೀತುಪಡಿಸಲಿದ್ದೇವೆ’’ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.