×
Ad

ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ಇಲ್ಲದಿದ್ದರೆ ಅನುಮತಿ ಇಲ್ಲ

Update: 2019-11-26 22:53 IST

ಮಂಗಳೂರು, ನ.26: ನಗರ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಸಂದರ್ಭ ದ್ರವತ್ಯಾಜ್ಯ ನಿರ್ವಹಣಾ ಘಟಕ (ಎಸ್‌ಟಿಪಿ) ರಚಿಸುವುದನ್ನು ಕಡ್ಡಾಯಗೊಳಿಸಲಾಗಿರುವಂತೆಯೇ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಿಗೂ ಅದನ್ನು ಕಡ್ಡಾಯಗೊಳಿಸಲಾಗಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾಗುವ ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ ಇಲ್ಲದಿದ್ದಲ್ಲಿ ಅನುಮತಿಯನ್ನು ನೀಡಲಾಗದು. ಈಗಾಗಲೇ 2 ಗ್ರಾಮ ಪಂಚಾಯತ್‌ಗಳಲ್ಲಿ ಎಸ್‌ಟಿಪಿ ಇಲ್ಲದ ಅಪಾರ್ಟ್‌ಮೆಂಟ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದರು.

ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ 18ನೆ ಸಾಮಾನ್ಯ ಸಭೆಯಲ್ಲಿ ಸದಸ್ಯೆ ಮಮತಾಗಟ್ಟಿಯವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ಈ ಸ್ಪಷ್ಟನೆ ನೀಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಒಳಚರಂಡಿಯ ವ್ಯವಸ್ಥೆಯೇ ಇಲ್ಲ. ಒಳಚರಂಡಿ ನೀರು ಎಲ್ಲಿ ಹೋಗಬೇಕು ಎಂದು ಮಮತಾ ಗಟ್ಟಿ ಪ್ರಶ್ನಿಸಿದರು.

ಡಾ. ಸೆಲ್ವಮಣಿ ಪ್ರತಿಕ್ರಿಯಿಸಿ, ಗ್ರಾಮೀಣ ಪ್ರದೇಶಗಳಲ್ಲಿ ರಚನೆಯಾಗುವ ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿಯನ್ನು ಕಡ್ಡಾಯಗೊಳಿಸಲು ಸೂಚಿಸಲಾಗಿದೆ ಎಂದರು.

ಸ್ವಚ್ಛ ಕಾರ್ಯಕ್ರಮ ಉದ್ಘಾಟನೆಗೆ ಮಾತ್ರ ಸೀಮಿತವೇ ?

ಗ್ರಾಮ ಪಂಚಾಯತ್‌ಗಳಲ್ಲಿ ಸ್ವಚ್ಛ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಗುತ್ತದೆ. ಅದರ ಫೋಟೋ ಕೂಡಾ ತೆಗೆಯಲಾಗುತ್ತದೆ. ಆದರೆ ಕಸ ತೆಗೆದು ಸ್ವಚ್ಛಗೊಳಿಸುವ ಕಾರ್ಯ ಮಾತ್ರ ನಡೆಯುವುದಿಲ್ಲ. ದ.ಕ. ಜಿಲ್ಲೆ ಬಯಲು ಶೌಚ ಮುಕ್ತ ಜಿಲ್ಲೆಯಾಗಿ ಪ್ರಶಸ್ತಿ ಸ್ವೀಕರಿಸಿದ್ದರೂ, ಅನೇಕ ಮನೆಗಳಲ್ಲಿ ಶೌಚಾಲಯವೇ ಇಲ್ಲದಿರುವ ವರದಿಯಾಗಿದೆ ಎಂದು ಆಡಳಿತ ಪಕ್ಷದ ಸದಸ್ಯರಾದ ಕೊರಗಪ್ಪ ನಾಯ್ಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಒ, ಈ ಹಿಂದಿನ ಹಂತದಲ್ಲಿ ಬಿಟ್ಟು ಹೋಗಿರುವ ಶೌಚಾಲಯಗಳಿಲ್ಲದ 920 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. ಬಳಿಕ ಮತ್ತೆ ಸಮಗ್ರ ಪರಿಶೀಲನೆ ನಡೆಸಿ ಮತ್ತೂ ಪಟ್ಟಿಯಲ್ಲಿ ಬಿಟ್ಟುಹೋದ 235 ಪ್ರಕರಣಗಳನ್ನು ಸೇರಿಸ ಲಾಗಿದೆ. ಈ ಬಗ್ಗೆ ಶಾಸಕರ ಸಮಿತಿಗೂ ಮಾಹಿತಿಯನ್ನು ಒದಗಿಸಲಾಗಿದೆ. ಅಲ್ಲಿ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳ ಲಾಗಿದೆ. ಇನ್ನೂ ಎಲ್ಲೆಲ್ಲ ಶೌಚಾಲಯ ಆಗಿಲ್ಲ ಎಂಬ ಮಾಹಿತಿ ನೀಡಿದರೆ ಅಲ್ಲೂ ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ನೆಡುತೋಪು ಹಗರಣ ತನಿಖೆಗೆ ತಂಡ

40 ಲಕ್ಷ ರೂ. ವೌಲ್ಯದ ನೆಡುತೋಪು ಹರಾಜಿನಲ್ಲಿ ಗ್ರಾ.ಪಂಗೆ ಜುಜುಬಿ 54,885 ರೂ. ಸಿಕ್ಕಿದ್ದು ಯಾವ ನ್ಯಾಯ? ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸದಸ್ಯೆ ಮಮತಾ ಗಟ್ಟಿ ಆಗ್ರಹಿಸಿದರು.

ನರಿಂಗಾನ ಗ್ರಾಪಂನ 12 ಹೆಕ್ಟೇರ್ ಪ್ರದೇಶದಲ್ಲಿದ್ದ ಮ್ಯಾಂಜಿಯಂ, ಅಕೇಶಿಯಾ ನೆಡುತೋಪು ಕಟಾವಿಗೆ ಮೊದಲು 40 ಲಕ್ಷ ರು. ಆದಾಯವನ್ನು ಅಂದಾಜಿಸಲಾಗಿತ್ತು. ಆದರೆ ಮರಗಳ ಕಟಾವಿನ ಬಳಿಕ ಹರಾಜಿನಲ್ಲಿ ಕೇವಲ 11,33,542 ರು. ಮಾತ್ರ ಆದಾಯ ದೊರಕಿದೆ. ಸರ್ಕಾರಕ್ಕೆ ಆದಾಯ ಖೋತಾ ಆಗಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಹಾಗೂ ವಿರೋಧ ಕ್ಷದ ಸದಸ್ಯರು ಆಗ್ರಹಿಸಿದರು.

ತನಿಖೆಗೆ ಮೂರು ಮಂದಿಯನ್ನು ನೇಮಕ ಮಾಡಿ ಕ್ರಮ ಕೈಗೊಳ್ಳುವುದಾಗಿ ಕೈಗೊಳ್ಳುವುದಾಗಿ ಸಿಇಒ ಸೆಲ್ವಮಣಿ ಸಭೆಯಲ್ಲಿ ತಿಳಿಸಿದರು.

ಡೀಮ್ಡ್ ಫಾರೆಸ್ಟ್ ಬಗ್ಗೆ ನಕ್ಷೆಯೇ ಇಲ್ಲ!

ಕುಮ್ಕಿ ಜಮೀನು, ಡೀಮ್ಡ್ ಫಾರೆಸ್ಟ್, ದಾನಪತ್ರದ ಮೂಲಕ ದೊರೆತ ಜಾಗ ಇತ್ಯಾದಿ ಸಮಸ್ಯೆಗಳಿಂದ ಜಿಲ್ಲೆಯ 85 ಶಾಲೆಗಳಿಗೆ ಆರ್‌ಟಿಸಿ ದೊರೆಯದಿರುವ ಬಗ್ಗೆ ಸದಸ್ಯ ಶೇಖರ ಕುಕ್ಕೇಡಿ ವಿಷಯ ಪ್ರಸ್ತಾಪಿಸಿ ಅರಣ್ಯ ಇಲಾಖೆು ಅಧಿಕಾರಿಗಳನ್ನು ತರಾಟೆಗೈದರು.

ಹಿಂದೆ ಶಾಲೆಗಳಿಗೆ ದಾನಪತ್ರದ ಮೂಲಕ ಅನೇಕರು ಜಾಗ ನೀಡಿದ್ದರೂ ಈಗ ಆ ಜಾಗವನ್ನು ಶಾಲೆ ಹೆಸರಿಗೆ ಮಾಡಿಸಲು 40 ಸಾವಿರ ರೂ. ಶುಲ್ಕ ಕೇಳುತ್ತಿರುವುದರಿಂದ ಸಮಸ್ಯೆಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೊ ತಿಳಿಸಿದರು.

ದಾನ ರೂಪದಲ್ಲಿ ಜಾಗವನ್ನು ನೀಡುವಾಗ ಶುಲ್ಕವನ್ನು ಪಡೆಯಬಾರದು. ಈ ಬಗ್ಗೆ ಜಿಲ್ಲಾ ಪಂಚಾಯತ್ ನಿರ್ಣಯ ಮಾಡಬೇಕು ಎಂದು ಸಸ್ಯೆ ಮಮತಾ ಗಟ್ಟಿ ಆಗ್ರಹಿಸಿದರು.

ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಜಾಗ ಇದ್ದರೂ ಶಾಲೆ ಹೆಸರಿಗೆ ಆಗುತ್ತಿಲ್ಲ ಎಂದು ಆಡಳಿತ, ವಿಪಕ್ಷ ಸದಸ್ಯರು ಹರಿಹಾಯ್ದರು. ಖಾಸಗಿಯಾದರೆ ಅಧಿಕಾರಿಗಳು ಬೇಗ ಹೋಗಿ ಸರ್ವೇ ಮಾಡ್ತಾರೆ, ಸರ್ಕಾರಿ ಜಾಗಕ್ಕೆ ಉದಾಸೀನ ಮಾಡುತ್ತಾರೆ ಎಂಬ ಆರೋಪವೂ ಕೇಳಿಬಂತು. ಕೊನೆಗೆ ಪ್ರತಿಕ್ರಿಯಿಸಿದ ಸಿಇಒ ಸೆಲ್ವಮಣಿ, ಶಾಲೆಗಳಿಗೆ ದಾನವಾಗಿ ಸಿಕ್ಕಿದ ಜಾಗದ ರಿಜಿಸ್ಟ್ರೇಶನ್ ಶುಲ್ಕವನ್ನು ರದ್ದು ಮಾಡುವ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿಯೂ, ಕುಮ್ಕಿ ಜಾಗದ ಸಮಸ್ಯೆ ಕುರಿತು ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರು.

ಶುದ್ಧ ನೀರಿನ ಘಟಕ ದುರಸ್ತಿ ಕುರಿತಂತೆ ಇಂದು ಕೂಡಾ ಸಭೆಯಲ್ಲಿ ಪ್ರಸ್ತಾಪವಾಯಿತು. 125 ಘಟಕಗಳಲ್ಲಿ 14 ಘಟಕಗಳನ್ನು ನಿರ್ವಹಣೆಗಾಗಿ ಗ್ರಾಪಂಗಳಿಗೆ ಬಿಟ್ಟುಕೊಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದರು. ಆಡಳಿತ ನಡೆಸುವವರಿಗೆ ಘಟಕ ದುರಸ್ತಿ ಮಾಡುವ ಇಚ್ಛಾಶಕ್ತಿ ಇಲ್ಲದೆ ಯೋಜನೆ ಜನರ ಉಪಯೋಗಕ್ಕೆ ಸಿಗುತ್ತಿಲ್ಲ ಎಂದು ಸದಸ್ಯ ಎಂ.ಎಸ್. ಮಹಮ್ಮದ್ ಆರೋಪಿಸಿದರು.

ಸಂಬಂಧಿಸಿದ ಅಧಿಕಾರಿಗಳು ನಾಳೆಯಿಂದಲೇ ಘಟಕಗಳಿಗೆ ಭೇಟಿ ನೀಡಬೇಕು. ಎಷ್ಟು ಘಟಕಗಳ ದುರಸ್ತಿಯಾಗಬೇಕು, ಯಾವ ದಿನಾಂಕದಂದು ಯಾವ ಘಟಕ ದುರಸ್ತಿ ಮಾಡಲಾಗುತ್ತದೆ ಎಂಬ ವಿವರವನ್ನು ಮೊದಲೇ ನೀಡಬೇಕು ಎಂದು ಜಿಂ ಸಿಇಒ ಅಧಿಕಾರಿಗಳಿಗೆ ನಿರ್ದೇಶಿಸಿದರು.

ವಸತಿ ನಿಗಮ 213 ಕೋ.ರೂ. ಬಾಕಿ

ದ.ಕ ಜಿಲ್ಲೆಯಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ವಿತರಿಸಲು 213 ಕೋಟಿ ರೂ. ಬರಲು ಬಾಕಿ ಇದೆ. ಅನೇಕ ವಸತಿರಹಿತರು ಮನೆಗಳನ್ನು ನಿರ್ಮಿಸುತ್ತಿದ್ದು, ವಿವಿಧ ಹಂತಗಳಲ್ಲಿ ನಿಂತಿದೆ. ಸರ್ಕಾರಕ್ಕೆ ಈ ಕುರಿತು ಹಿಂದೆಯೇ ಮನವಿ ಕಳುಹಿಸಲಾಗಿತ್ತು, ಈಗ ಮತ್ತೆ ಪಟ್ಟಿಯನ್ನು ತಾಲೂಕುಗಳಿಂದ ತರಿಸಿಕೊಂಡು ನವೀಕೃತ ಪಟ್ಟಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿರುವುದಾಗಿ ದ.ಕ ಜಿಪಂ ಸಿಇಒ ಡಾ.ಆರ್.ಸೆಲ್ವಮಣಿ ತಿಳಿಸಿದರು.

ಗಂಜಿಊಟ ಮಾಡೋರಿಗೆ ಪೊಗರಂತೆ!

ದ.ಕ. ಮೂಲದ ಡ್ರೈವರ್, ಕಂಡಕ್ಟರ್‌ಗಳ ಮೇಲೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆಂಬ ಆರೋಪ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ದಕ್ಷಿಣ ಕನ್ನಡ ಮೂಲದ ಕೆಎಸ್ಸಾರ್ಟಿಸಿ ಚಾಲಕರಿಗೆ ರಾತ್ರಿ 9-10 ಗಂಟೆವರೆಗೆ ದುಡಿದರೂ ಬೆಳಗ್ಗೆ 5 ಗಂಟೆಗೇ ಮತ್ತೆ ಡ್ಯೂಟಿಗೆ ಹಾಜರಾಗಲು ಹೇಳುತ್ತಿದ್ದಾರೆ. ‘ಗಂಜಿ ಊಟ ಮಾಡೋರಿಗೆ ಇಷ್ಟೊಂದು ಪೊಗರಾ’ ಎಂದು ಹೇಳಿ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಮುಂದೆ ಈ ರೀತಿ ತೊಂದರೆ ಮಾಡಿದರೆ ನಾವು ಬಿಡುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪ್ರಾಕೃತಿಕ ವಿಕೋಪ: 3.6 ಕೋಟಿ ರೂ. ಬಿಡುಗಡೆ

ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಉಂಟಾದ ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಮನೆಗಳ ಪುನನಿರ್ಮಾಣಕ್ಕೆ ಜಿಲ್ಲೆಗೆ ಇದುವರೆಗೆ ಒಟ್ಟು 3.6 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಶೇ.70ಕ್ಕೂ ಹೆಚ್ಚು ಹಾನಿಯಾದ 271 ಮನೆಗಳಿವೆ, ಶೇ.75ಕ್ಕಿಂತ ಕಡಿಮೆ ಹಾನಿಯಾದ 629 ಮನೆ ಗುರುತಿಸಲಾ ಗಿದೆ, 24 ಮನೆಗಳನ್ನು ಜಿಪಿಎಸ್ ಮೂಲಕ ಅಪ್‌ಲೋಡ್ ಮಾಡಲಾಗಿದ್ದು ಪಂಚಾಂಗದ ಕೆಲಸ ಪ್ರಾರಂಭವಾಗಿದೆ. ಇದುವರೆಗೆ ಸರ್ಕಾರದಿಂದ ಮನೆಗಳ ಪುನನಿರ್ಮಾಣಕ್ಕೆ 3.6 ಕೋಟಿ. ರೂ ಬಿಡುಗಡೆಯಾಗಿರುವುದಾಗಿ ಯೋಜನಾ ನಿರ್ದೇಶಕ ಮಧು ಕುಮಾರ್ ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News