ನ್ಯೂ ಶಮ್ಸ್ ಶಾಲೆಯಲ್ಲಿ ಸಂವಿಧಾನ ದಿನ ಕಾರ್ಯಕ್ರಮ

Update: 2019-11-26 17:36 GMT

ಭಟ್ಕಳ : ಭಾರತೀಯ ಸಂವಿಧಾನ ದಿನಾಚರಣೆಯ ಅಂಗವಾಗಿ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಐ.ಸಿ.ಎಸ್.ಇ ಪಠ್ಯಕ್ರಮದ ನ್ಯೂ ಶಮ್ಸ್ ಶಾಲೆಯಲ್ಲಿ ವಿದ್ಯಾರ್ಥಿಗಳು ಮಂಗಳವಾರದಂದು ಸಂವಿಧಾನ ಜಾಗೃತಿ ಕುರಿತಂತೆ ಬೀದಿನಾಟಕ ಪ್ರದರ್ಶಿಸಿ ಗಮನ ಸೆಳೆದರು.

ಸಂವಿಧಾನದ ಪ್ರಸ್ತಾವನೆಯಲ್ಲಿರುವ ಅಂಶಗಳನ್ನು ಪ್ಲೆಕಾರ್ಡ್ ಮೂಲಕ ಪ್ರದರ್ಶಿಸಿ ಸಮಾನತೆ, ಐಕ್ಯತೆ, ಸಹೋದರತ್ವ, ಸಹಬಾಳ್ವೆಯ ಜೀವನ ನಡೆಸಬೇಕೆಂಬ ಸಂದೇಶ ಸಾರಿದರು.

ಈ ಸಂದರ್ಭ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಸಾಹಿಲ್ ಆನ್‍ಲೈನ್ ಸುದ್ದಿತಾಣದ ವ್ಯವಸ್ಥಾಪಕ ಪತ್ರಕರ್ತ ಮುಬಶ್ಶಿರ್ ಹಲ್ಲಾರೆ ಮಾತನಾಡಿ, ಸಂವಿಧಾನ ನಮಗೆ ಬದುಕುವ ಹಕ್ಕನ್ನು ದಯಪಾಲಿಸಿದೆ. ನಾವಿಂದು ಸ್ವಚ್ಛಂದ ವಾತಾವರಣದಲ್ಲಿ ಉಸಿರಾಡುತ್ತಿದ್ದರೆ ಅದು ನಮ್ಮ ದೇಶದ ಸಂವಿಧಾನ ನೀಡಿದ ಕೊಡುಗೆಯಾಗಿದ್ದು ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಆರ್.ಮಾನ್ವಿ ಮಾತನಾಡಿ ಬಾಬಾಸಾಹೇಬ ಅಂಬೇಡ್ಕರ್  ಶಿಕ್ಷಣದ ಮೂಲಕ ಸಮಾನತೆ ಸಾರಿದರು. ಅವರ ದೂರದೃಷ್ಟಿಯ ಫಲವಾಗಿ ಸರ್ವರಿಗೆ ಸಮಬಾಳು ಹಾಗೂ ಸರ್ವರಿಗೆ ಸಮಪಾಲು ನೀಡುವ ಸಂವಿಧಾನ ಅಸ್ತಿತ್ವಕ್ಕೆ ಬಂತು. ಸಂವಿಧಾನವು ದೇಶದ ಜನರಿಗೆ ಅವರವರ ಧರ್ಮಕ್ಕನುಗುಣವಾಗಿ ಬದುಕುವ, ಅದನ್ನು ಆಚರಿಸುವ ಹಾಗೂ ಅವರ ಸಂಸ್ಕೃತಿಗೆ ಅನುಗುಣವಾಗಿ ಜೀವಿಸುವ ಹಕ್ಕು ನೀಡಿದ್ದು ಇದಕ್ಕೆ ಬದ್ದರಾಗಿರು ವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿ ತಾವು ಸಂವಿಧಾನಕ್ಕೆ ಬದ್ಧರಾಗಿರುವು ದಾಗಿ ಪ್ರಮಾಣಗೈದರು. ವಿದ್ಯಾರ್ಥಿಸಂಘದ ನಾಯಕ ಕು.ನಾದಿರ್ ಆಹಮದ್ ಇಕ್ಕೇರಿ ಪ್ರತಿಜ್ಞಾವಿಧಿ ಬೋಧಿಸಿದರು.

ಶಾಲಾ ಆಡಳಿತ ಮಂಡಳಿಯ ಎಸ್.ಎಂ.ಸೈಯ್ಯದ್ ಝುಬೇರ್, ಪ್ರಾಂಶುಪಾಲೆ ಫಹಮಿದಾ ಮುಲ್ಲಾ, ಅಬ್ದುಲ್ಲಾ ಖಲಿಫಾ, ಅಬ್ದುಸ್ಸುಭಾನ್ ನದ್ವಿ, ಮಂಜುನಾಥ್ ಹೆಬ್ಬಾರ್, ಶಾಝಿರ್ ಹುಸೇನ್ ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News