ಢಾಕಾ ಕೆಫೆ ದಾಳಿ: 7 ಮಂದಿಗೆ ಮರಣ ದಂಡನೆ

Update: 2019-11-27 14:11 GMT

ಢಾಕಾ (ಬಾಂಗ್ಲಾದೇಶ), ನ. 27: 2016ರಲ್ಲಿ ಬಾಂಗ್ಲಾದೇಶದ ರಾಜಧಾನಿ ಢಾಕಾದ ಕೆಫೆಯೊಂದರ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಭಯೋತ್ಪಾದಕ ಸಂಘಟನೆಯೊಂದರ ಏಳು ಸದಸ್ಯರಿಗೆ ಆ ದೇಶದ ನ್ಯಾಯಾಲಯವೊಂದು ಬುಧವಾರ ಮರಣ ದಂಡನೆ ವಿಧಿಸಿದೆ.

2016ರ ಜುಲೈ 1ರಂದು ‘ಹೋಲಿ ಆರ್ಟಿಸಾನ್ ಕೆಫೆ’ಯ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು 22 ಮಂದಿಯನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಮೃತರಲ್ಲಿ ಹೆಚ್ಚಿನವರು ವಿದೇಶಿಯರು.

‘‘ಅವರ ವಿರುದ್ಧದ ಆರೋಪಗಳು ಸಂಶಯಾತೀತವಾಗಿ ಸಾಬೀತಾಗಿವೆ. ನ್ಯಾಯಾಲಯವು ಅವರಿಗೆ ಗರಿಷ್ಠ ಶಿಕ್ಷೆಯನ್ನು ನೀಡಿದೆ’’ ಎಂದು ನ್ಯಾಯಾಲಯ ತೀರ್ಪು ನೀಡಿದ ಬಳಿಕ ಪಬ್ಲಿಕ್ ಪ್ರಾಸಿಕ್ಯೂಟರ್ ಗೋಲಮ್ ಸರ್ವರ್ ಖಾನ್ ಸುದ್ದಿಗಾರರಿಗೆ ತಿಳಿಸಿದರು. ಎಂಟು ಆರೋಪಿಗಳ ಪೈಕಿ ಓರ್ವನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ ಎಂದು ಅವರು ಹೇಳಿದರು.

ಢಾಕಾದ ರಾಜತಾಂತ್ರಿಕ ಪ್ರದೇಶದಲ್ಲಿರುವ ಹೆಚ್ಚಾಗಿ ವಿದೇಶಿಯರೇ ಹೋಗುವ ರೆಸ್ಟೋರೆಂಟ್ ಮೇಲೆ ನಡೆದ ಭಯೋತ್ಪಾದಕ ದಾಳಿಯು ದೇಶವನ್ನೇ ನಡುಗಿಸಿತ್ತು. ಐವರು ಭಯೋತ್ಪಾದಕರು ರೆಸ್ಟೋರೆಂಟ್ ಒಳಗೆ ನುಗ್ಗಿ ಅಲ್ಲಿ ನೆರೆದಿದ್ದವರನ್ನು ಒತ್ತೆ ಸೆರೆಯಲ್ಲಿ ಇಟ್ಟುಕೊಂಡರು. ಬಳಿಕ 12 ಗಂಟೆಗಳ ಅವಧಿಯಲ್ಲಿ ಅವರನ್ನು ಕೊಂದರು. ಮೃತರಲ್ಲಿ 9 ಇಟಲಿಯನ್ನರು, 7 ಜಪಾನೀಯರು, ಓರ್ವ ಅಮೆರಿಕನ್ ಮತ್ತು ಓರ್ವ ಭಾರತೀಯರಿದ್ದರು.

ಬಳಿಕ ನಡೆದ ಕಮಾಂಡೋ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರನ್ನೂ ಕೊಲ್ಲಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News