×
Ad

ಭವಿಷ್ಯನಿಧಿ ಹೆಸರಿನಲ್ಲಿ ವಂಚನೆ: ದೂರು

Update: 2019-11-27 21:53 IST

ಉಡುಪಿ, ನ.27: ಕಾರ್ಮಿಕರ ಭವಿಷ್ಯನಿಧಿ ಹೆಸರಿನಲ್ಲಿ ಸರಕಾರಿ ಸಂಸ್ಥೆಗೆ ಮೋಸ ಮಾಡಿರುವ ಬಗ್ಗೆ ಕಾರ್ಮಿಕರ ಭವಿಷ್ಯನಿಧಿ ಸಂಘಟನೆ ಉಡುಪಿ ಪ್ರಾದೇಶಿಕ ಕಛೇರಿಯ ಪ್ರವರ್ತನ ಅಧಿಕಾರಿ ಮಲ್ಲಿಕಾರ್ಜುನ ರೆಡ್ಡಿ ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಠಲ್ ಜತ್ತನ್ ಎಂಬವರು ಉಡುಪಿಯ ಕೋರ್ಟ್ ಹಿಂಬದಿ ರಸ್ತೆಯಲ್ಲಿ ಸಿದ್ದಿ ವಿನಾಯಕ ಆಟೋ ಟ್ರಾವೆಲ್ಸ್ ಏಜೆನ್ಸಿ ಎಂಬ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದು, ಸುಳ್ಳು ಹಾಗೂ ನಕಲಿ ಮಾಹಿತಿಯನ್ನು ಶ್ರಮ ಸುವಿಧ ಪೋರ್ಟಲ್ ಜಾಲತಾಣದಲ್ಲಿ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಿ ಅಕ್ರಮವಾಗಿ ಇಪಿಎಫ್‌ಓ ಕೋಡ್‌ನ್ನು ಪಡೆದು, ಅಸಂಘಟಿತ ವಲಯದ ರಿಕ್ಷಾ ಚಾಲಕರು ಮತ್ತು ಆಟೋ ಗ್ಯಾರೇಜ್ ಕಾರ್ಮಿಕರಿಂದ ತನ್ನದೇ ಆಗಿರುವ ಸ್ವಂತ ರಶೀದಿಯನ್ನು ಕೊಟ್ಟು, ಹಣವನ್ನು ಸಂಗ್ರಹಿಸಿ, ಪಿ.ಎಫ್. ಕಛೇರಿಗೆ ಸುಳ್ಳು ನೊಂದಾಯಿಸಲಾಗಿರುವ ಸದಸ್ಯರ ಖಾತೆಯನ್ನು ತೆರೆದು, ಆನ್‌ಲೈನ್ ಮೂಲಕ ಹಣ ಪಾವತಿಸಿದ್ದಾರೆಂದು ದೂರಲಾಗಿದೆ.

ಅಲ್ಲದೆ ಕೇಂದ್ರ ಸರಕಾರದ ಪಿಎಂಆರ್‌ಪಿವೈ ಯೋಜನೆಯ ದುರ್ಬಳಕೆ ಮಾಡಿದ್ದಾರೆ. ಈ ವ್ಯಕ್ತಿ ಉದ್ಯೋಗದಾರನೆಂದು ಹೇಳಿಕೊಂಡು ಆನ್‌ಲೈನ್‌ನಲ್ಲಿ ಸಲ್ಲಿಸಿರುವ ದಾಖಲೆಗಳಲ್ಲಿ ತನ್ನನ್ನು ಕೂಡಾ ಉದ್ಯೋಗಿ ಎಂದು ಹೇಳಿಕೊಂಡು, ಸರಕಾರಿ ಸಂಸ್ಥೆಯಿಂದ ಲಾಭ ಪಡೆದು ನಂಬಿಕೆದ್ರೋಹ ಹಾಗೂ ವಂಚನೆ ಎಸಗಿದ್ದಾನೆ ಎಂದು ಮಲ್ಲಿಕಾರ್ಜುನ ರೆಡ್ಡಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News