ಗುಡ್ಡಟ್ಟು: ಅರಣ್ಯ ಇಲಾಖೆಯ ಬೋನಿನಲ್ಲಿ ಚಿರತೆ ಸೆರೆ

Update: 2019-11-27 16:40 GMT

ಶಂಕರನಾರಾಯಣ, ನ.27: ಕಳೆದ ಕೆಲವು ತಿಂಗಳುಗಳಿಂದ ಯಡಾಡಿ ಮತ್ಯಾಡಿ ಗ್ರಾಪಂ ವ್ಯಾಪ್ತಿಯ ಗುಡ್ಡಟ್ಟು ಪರಿಸರದ ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.

ಗುಡ್ಡಟ್ಟು ಪರಿಸರದಲ್ಲಿ ಕೆಲವು ತಿಂಗಳುಗಳಿಂದ ಚಿರತೆಯೊಂದು ಓಡಾಟ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಶಂಕರನಾರಾಯಣ ವಲಯ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿಯಲು 15 ದಿನಗಳ ಹಿಂದೆ ಗುಡ್ಡಟ್ಟು ಚಂದ್ರಾವತಿ ಎಂಬವರ ಮನೆಯ ಬಳಿ ನಾಯಿಯೊಂದಿಗೆ ಬೋನು ಇರಿಸಿದ್ದರು.

ನ.26ರಂದು ರಾತ್ರಿ ನಾಯಿ ಬೇಟೆಗೆ ಬಂದ ಚಿರತೆ ಬೋನಿನೊಳಗೆ ಸೆರೆ ಯಾಗಿದ್ದು, ಇದನ್ನು ಇಂದು ಬೆಳಗಿನ ಜಾವ ನೋಡಿದ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಚಿರತೆ ಯನ್ನು ರಕ್ಷಿಸಿದ್ದಾರೆ. ಆರೋಗ್ಯವಂತವಾಗಿದ್ದ ಚಿರತೆ ಯನ್ನು ಬಿದ್ಕಲ್‌ಕಟ್ಟೆಯ ಪಶುವೈದ್ಯಾಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದರು.

ಬಳಿಕ ಇಲಾಖೆಯವರು 4-5ವರ್ಷ ವಯಸ್ಸಿನ ಈ ಗಂಡು ಚಿರತೆಯನ್ನು ಹೊಸಂಗಡಿಯ ಅಭಯಾರಣ್ಯದಲ್ಲಿ ಬಿಟ್ಟಿದ್ದಾರೆ.
ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ, ಉಪವಲಯ ಅರಣ್ಯಾಧಿಕಾರಿಗಳಾದ ಸಂತೋಷ್, ಹರೀಶ್, ಅರಣ್ಯ ರಕ್ಷಕರಾದ ರವೀಂದ್ರ, ಗುರುರಾಜ್, ವೀಕ್ಷಕರಾದ ಲಕ್ಷ್ಮಣ್ ಮತ್ತು ಶಿವ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News