ಮುಖವಾಣಿ ಸಾಮ್ನಾದಲ್ಲಿ ಶರದ್ ಪವಾರ್ ರನ್ನು' ಮಾರ್ಗದರ್ಶಕ್ ' ಎಂದು ಬಣ್ಣಿಸಿದ ಶಿವಸೇನೆ

Update: 2019-11-28 05:02 GMT

ಮುಂಬೈ, ನ.28: ಮಾಜಿ ಪ್ರತಿಸ್ಪರ್ಧಿ, ಶೀಘ್ರದಲ್ಲೇ ಸರ್ಕಾರದಲ್ಲಿ ಪಾಲುದಾರರಾಗಿರುವ ಎನ್‌ಸಿಪಿಯ ಶರದ್ ಪವಾರ್ ಅವರಿಗೆ   ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ  ಗೌರವ ಸಲ್ಲಿಸಿ 'ಮಾರ್ಗದರ್ಶಕ್ ' ಎಂದು ಬಣ್ಣಿಸಿದೆ.

78ರ ಹರೆಯದ ಪವಾರ್ ಅವರ ಸಾಮರ್ಥ್ಯದ ಬಗ್ಗೆ  ಗುರುವಾರ ಪ್ರಕಟಗೊಂಡ ಸಾಮ್ನಾದಲ್ಲಿ ಗುಣಗಾಣ ಮಾಡಿದೆ.  

ಮಹಾರಾಷ್ಟ್ರದಲ್ಲಿ ಶಿವಸೇನೆಯು  ಪವಾರ್ ಅವರ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಜೊತೆ ಆಡಳಿತ ಚುಕ್ಕಾಣಿಯನ್ನು ಹಿಡಿಯಲು  ಸಿದ್ಧತೆ ನಡೆಸಿದೆ.

ಕಳೆದ ವಾರಾಂತ್ಯದಲ್ಲಿ, ಈ ಒಕ್ಕೂಟವು ಇನ್ನೂ ಮಾತುಕತೆ ನಡೆಸುತ್ತಿದ್ದಾಗ, ಎನ್‌ಸಿಪಿಯ ಬಂಡಾಯ ಮುಖಂಡರು ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಳ್ಳಲು ಮುಂದಾದರು. ಆದರೆ "ಮಹಾ ವಿಕಾಸ್ ಅಘಾಡಿ"  ಬಿಜೆಪಿಗೆ ಬಲವಾದ ಪೆಟ್ಟು ನೀಡಿತು.  ನಾಲ್ಕು ದಿನಗಳಲ್ಲಿ, ಎನ್‌ಸಿಪಿ ಶರದ್ ಪವಾರ್ ಅವರ ಅಣ್ಣನ ಮಗ  ಅಜಿತ್  ಪವಾರ್  ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು, ಬಿಜೆಪಿ ಸರ್ಕಾರದ ಪತನಕ್ಕೆ  ನಾಂದಿ ಹಾಡಿದರು. ಅಜಿತ್ ಪವಾರ್ ನ್ನು ನಂಬಿದ್ದ ಬಿಜೆಪಿಯ ದೇವೇಂದ್ರ ಫಡ್ನವೀಸ್ ಬೇರೆ ದಾರಿ ಕಾಣದೆ ರಾಜೀನಾಮೆ ನೀಡಿದರು.  ಆಗ ಪ್ರತಿಪಕ್ಷ ಮೈತ್ರಿಕೂಟಕ್ಕೆ ಅಧಿಕಾರ ಹಡಿಯುವ  ಹಾದಿ  ಸುಗಮವಾಯಿತು

ಇಂದು ಸಂಜೆ ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಅವರು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ

'ಮೋಸ ಮತ್ತು ಪಿತೂರಿಗಳಿಗೆ'  ಅವಕಾಶ ನೀಡದೆ ರಾಜ್ಯ ಆಡಳಿತ ಯಂತ್ರದ ದುರುಪಯೋಗಕ್ಕೆ ಅವಕಾಶ ನೀಡದೆ ಸ್ವಚ್ಛ ಆಡಳಿತವನ್ನು ನೀಡುವುದಾಗಿ ಶಿವಸೇನೆ ಹೇಳಿದೆ.

ಅಜಿತ್ ಪವಾರ್ ಮತ್ತೆ ಉಪ ಮುಖ್ಯ ಮಂತ್ರಿಯಾಗುತ್ತಾರೋ   ?

ಶಿವಸೇನಾ ಮುಖಂಡ ಸಂಜಯ್ ರಾವತ್ ಅವರಲ್ಲಿ  ಅಜಿತ್ ಪವಾರ್ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗುತ್ತದೆಯೇ ಎಂದು ಸುದ್ದಿಗಾರರು  ಕೇಳಿದಾಗ: ನನಗೆ ಗೊತ್ತಿಲ್ಲ, ಇದು ಎನ್‌ಸಿಪಿಯ ವಿಷಯವಾಗಿದೆ. ಶರದ್ ಪವಾರ್ ಅವರು 'ಮಹಾ ವಿಕಾಸ್ ಅಘಾಡಿ' (ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ) ಯ ಹಿರಿಯ ನಾಯಕರಾಗಿದ್ದು, ಅಜಿತ್ ಪವಾರ್ ಅಥವಾ ಅವರ ಪಕ್ಷದ ಬೇರೆಯವರಿಗೆ ಯಾವ ಹುದ್ದೆಯನ್ನು ನೀಡಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ

ಹೊಸ ಸರ್ಕಾರದಲ್ಲಿ ಆದಿತ್ಯ ಠಾಕ್ರೆ ಅವರಿಗೆ ಮಂತ್ರಿ ಸ್ಥಾನ ನೀಡುವ ಸಾಧ್ಯತೆಯ ಬಗ್ಗೆ  ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ‘ಉದ್ಧವ್ ಠಾಕ್ರೆ ಈಗ ಆದಿತ್ಯ ಠಾಕ್ರೆಯ  ತಂದೆ ಮಾತ್ರವಲ್ಲ ಮುಖ್ಯಮಂತ್ರಿಯೂ ಆಗಿದ್ದಾರೆ, ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ  ಎಂದು ಪ್ರತಿಕ್ರಿಯೆ ನೀಡಿದ್ದಾರೆ

ಸೂರ್ಯೋದಯದೊಂದಿಗೆ ಮಹಾರಾಷ್ಟ್ರದಲ್ಲಿ ಹೊಸ ಇತಿಹಾಸ: ಸುಪ್ರಿಯಾ ಸುಳೆ

 "ಇಂದಿನ ಸೂರ್ಯೋದಯವು ಹೊಸ ಇತಿಹಾಸವನ್ನು ಬರೆಯುತ್ತಿದೆ. ಮಹಾರಾಷ್ಟ್ರ ವಿಕಾಸ್ ಅಘಾದಿ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ. ಉದ್ಭವ್  ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾವೆಲ್ಲರೂ ಮಹಾರಾಷ್ಟ್ರವನ್ನು ಮತ್ತೆ ಬೆಳವಣಿಗೆಯ ಹಾದಿಯಲ್ಲಿ ಸಾಗಿಸುವತ್ತ ಕೆಲಸ ಮಾಡಬೇಕು. ಶುಭಾಶಯಗಳು,"  ಎಂದು ಎನ್ ಸಿಪಿ ನಾಯಕಿ ಸುಪ್ರಿಯಾ ಸುಳೆ  ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News