×
Ad

ರಾಷ್ಟ್ರಪತಿ ಭವನಕ್ಕಿಂತ ವಿಸ್ತಾರವಾಗಿ ರಾಮಮಂದಿರ ನಿರ್ಮಾಣವಾಗಲಿ: ಪುರಿ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ

Update: 2019-11-28 20:40 IST

ಉಡುಪಿ, ನ.28: ಜಗತ್ತಿನ ಮೊದಲ ರಾಜಧಾನಿಯಾಗಿದ್ದ ಅಯೋಧ್ಯೆಯಲ್ಲಿ ಭಾರತದ ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನಕ್ಕಿಂತ ವಿಸ್ತಾರವಾಗಿ ರಾಮಮಂದಿರವನ್ನು ನಿರ್ಮಿಸಬೇಕು ಎಂದು ಪುರಿ ಗೋವರ್ಧನ ಪೀಠದ ಶ್ರೀನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

ಮಂಚಿಯಲ್ಲಿ ವಾಸ್ತವ್ಯ ಹೂಡಿರುವ ಮನೆಯಲ್ಲಿ ಇಂದು ಕರೆದ ಸುದ್ದಿಗೋಷ್ಟಿ ಯಲ್ಲಿ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಮನು ಚಕ್ರವರ್ತಿ ನಿರ್ಮಿಸಿದ ಅಯೋಧ್ಯೆ, ಇಡೀ ಜಗತ್ತಿನ ಮೊದಲ ರಾಜಧಾನಿಯಾಗಿತ್ತು. ಆದರೆ ಅಯೋಧ್ಯೆ ವಿವಾದದ ಸಂದರ್ಭದಲ್ಲಿ ನ್ಯಾಯವಾದಿ ಗಳು ಕೋರ್ಟ್‌ನಲ್ಲಿ ಈ ವಿಚಾರಕ್ಕೆ ಹೆಚ್ಚು ಒತ್ತು ನೀಡಿರಲಿಲ್ಲ. ಹಾಗಾಗಿ ಈ ವಿಚಾರ ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ನಿರ್ಲಕ್ಷಕ್ಕೆ ಒಳಗಾಗಿತ್ತು ಎಂದರು.

ಭಾರತದ ರಾಜಧಾನಿ ದೆಹಲಿಯಲ್ಲಿರುವ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಅವರ ಭವನ 300ಕ್ಕೂ ಅಧಿಕ ಎಕರೆ ವಿಸ್ತಿರ್ಣವಾದ ಭೂಮಿಯಲ್ಲಿ ರುವಾಗ ಇಡೀ ಜಗತ್ತಿನ ಪ್ರಭು ರಾಮನಿಗೆ ಮಂದಿರವು ಅದಕ್ಕಿಂತ ವಿಸ್ತಾರವಾದ ಜಾಗದಲ್ಲಿ ಆಗಬೇಕು. ಆದುದರಿಂದ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣವನ್ನು ಒಪ್ಪಲು ಸಾಧ್ಯವಿಲ್ಲ. ಒಂದು ವೇಳೆ ಇಲ್ಲಿ ಬಾಬರಿ ಮಸೀದಿ ನಿರ್ಮಾಣವಾದರೆ ಮತ್ತೊಂದು ಪಾಕಿಸ್ತಾನ ಸೃಷ್ಠಿಯಾಗಬಹುದು. ಇದು ಹಿಂದು, ಮುಸ್ಲಿಮ್ ಮಾತ್ರವಲ್ಲ ಇಡೀ ದೇಶಕ್ಕೆ ಒಳ್ಳೆಯದಲ್ಲ ಎಂದು ಅವರು ತಿಳಿಸಿದರು.

ಅಯೋಧ್ಯೆ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ನಾನು ಒಪ್ಪುವುದಿಲ್ಲ. ಇಲ್ಲಿ ಮಸೀದಿ ನಿರ್ಮಿಸಲು ಅವಕಾಶ ಕೊಟ್ಟರೆ ನಮ್ಮ ದೇಶದಲ್ಲಿ ಇನ್ನೊಂದು ಮಕ್ಕಾ ನಿರ್ಮಾಣವಾಗುತ್ತದೆ. ಸುಪ್ರೀಂ ಕೋರ್ಟ್ ಈ ರೀತಿ ತೀರ್ಪು ನೀಡಲು ಪ್ರಧಾನಿ ನರೇಂದ್ರ ಮೋದಿ ಪ್ರಭಾವ ಇದೆಯೇ ಎಂಬ ಸಂಶಯ ಕಾಡುತ್ತದೆ ಎಂದು ಅವರು ಹೇಳಿದರು.

ಗಾಂಧೀಜಿಯ ಹೋರಾಟಕ್ಕೆ ಮಣಿದು ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ ನೀಡಿದರೂ, ಇದರಿಂದ ನಾವು ದೇಶ ಇಬ್ಘಾಗ ಹಾಗೂ ಸುಭಾಷ್ ಚಂದ್ರ ಬೋಸ್‌ರಂತಹ ನಾಯಕರನ್ನು ಕಳೆದುಕೊಳ್ಳಬೇಕಾಯಿತು. ಈಗಿನ ಸ್ವಾತಂತ್ರ ಭಾರತದಲ್ಲಿ ಅಯೋಧ್ಯೆ, ಕಾಶಿ, ಮಧುರ ಸೇರಿದಂತೆ ಪುಣ್ಯಭೂಮಿಗಳು ಹಿಂದು ಗಳಿಗೆ ಸೇರಿದ್ದಾಗಿದೆ. ಇದರಲ್ಲಿ ಯಾರಿಗೂ ಪಾಲು ಕೊಡಲು ಆಗುವುದಿಲ್ಲ. ಈ ಜಾಗ ನಮಗೆ ಸಿಗಲೇ ಬೇಕು. ಈ ವಿಚಾರದಲ್ಲಿ ನ್ಯಾಯ ತೀರ್ಮಾನ ನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಕೃಷಿಗೆ ಪೂರಕವಾಗಿರುವ ಗೋವನ್ನು ಕೇವಲ ವಾಣಿಜ್ಯ ಉದ್ದೇಶದಿಂದ ಮಾತ್ರ ನೋಡಲಾಗುತ್ತಿದೆ. ಗೋವಿನ ರಕ್ಷಣೆಯಿಂದ ಕೃಷಿ ಮತ್ತು ವಾಣಿಜ್ಯ ಎರಡೂ ಕ್ಷೇತ್ರಗಳಿಗೂ ಬಹಳಷ್ಟು ಪ್ರಯೋಜನ ಆಗಲಿದೆ. ಆದುದರಿಂದ ಈ ದೇಶದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಆದರೆ ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ನಿರಾಸಕ್ತಿ ತೋರಿಸುತ್ತಿವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News