ಬೆಳ್ವೆ ಸೂರ್ಗೋಳ್ಳಿ ಪತ್ನಿ ಮಕ್ಕಳ ಹತ್ಯೆ ಪ್ರಕರಣ : ಮಾನಸಿಕ ಅಸ್ವಸ್ಥತೆಯಿಂದ ಕೃತ್ಯ
ಉಡುಪಿ, ನ.28: ಬೆಳ್ವೆ ಗ್ರಾಮದ ಸೂರ್ಗೋಳಿಯಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೈಗೈದು ತಾನು ಆತ್ಮಹತ್ಯೆ ಮಾಡಿಕೊಂಡ ಸೂರ್ಯ ನಾರಾಯಣ ಅಲ್ಸೆ(52) ಕಳೆದ ಕೆಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದು, ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಹಠ ಮತ್ತು ಮುಂಗೋಪಿ ಸ್ವಭಾವದವನಾಗಿದ್ದ ಸೂರ್ಯ ನಾರಾಯಣ ಅಲ್ಸೆ, ಕೌಟುಂಬಿಕ ವಿಚಾರದಲ್ಲಿ ಮಾನಸಿಕ ಅಸ್ವಸ್ಥನಾಗಿ ನ.25ರ ಸಂಜೆಯಿಂದ ನ.27ರ ಸಂಜೆ 7:30ರ ಮಧ್ಯಾವಧಿಯಲ್ಲಿ ಮನೆಯ ಕೋಣೆಯಲ್ಲಿ ಪತ್ನಿ ಮಾನಸ (38) ಮತ್ತು ಮಕ್ಕಳಾದ ಸುಧೀಂದ್ರ(14) ಹಾಗೂ ಸುದೇಶ (9) ಎಂಬವರನ್ನು ದೊಣ್ಣೆ ಯಿಂದ ತಲೆಗೆ ಹೊಡೆದು ಕೊಲೆ ಮಾಡಿ, ಬಳಿಕ ತಾನು ಅದೇ ಕೋಣೆಯೊಳಗೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆ ಯಿಂದ ತಿಳಿದುಬಂದಿದೆ.
ಈ ಬಗ್ಗೆ ಸೂರ್ಯನಾರಾಯಣರ ಕಿರಿಯ ಸಹೋದರ ಪ್ರಕಾಶ್ ಅಲ್ಸೆ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್, ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ, ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್, ಮಂಜಪ್ಪ ಡಿ.ಆರ್., ಶಂಕರನಾರಾಯಣ ಎಸ್ಸೈ ಶ್ರೀಧರ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊರಗಿನವರ ಕೃತ್ಯ ಅಲ್ಲ
ಬೆಂಗಳೂರಿನಲ್ಲಿರುವ ಸೂರ್ಯನಾರಾಯಣ ಅಲ್ಸೆಯ ಸಹೋದರ ಸೂರ್ಯ ನಾರಾಯಣಗೆ ಮೊಬೈಲ್ ಕರೆ ಮಾಡಿದ್ದರು. ಆತ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಸಹೋದರ ಅಲ್ಲೇ ಸಮೀಪದಲ್ಲಿ ವಾಸವಾಗಿರುವ ಕಿರಿಯ ಸಹೋದರ ಪ್ರಕಾಶ್ ಅಲ್ಸೆಗೆ ತಿಳಿಸಿದ್ದರು.
ಅಲ್ಲದೆ ಮಕ್ಕಳು ಕೂಡ ನ.27ರಂದು ಶಾಲೆಗೆ ಹೋಗಿರಲಿಲ್ಲ. ಅದರಂತೆ ಪ್ರಕಾಶ್ ಅಲ್ಸೆ ಮನೆಗೆ ಬಂದು ಕಿಟಕಿಯಲ್ಲಿ ಇಣುಕಿ ನೋಡಿದಾಗ ಈ ಘಟನೆ ಬೆಳಕಿಗೆ ಬಂತೆನ್ನಲಾಗಿದೆ. ಆದುದರಿಂದ ನ.26ರಂದು ರಾತ್ರಿ ಅಂದರೆ 24 ಗಂಟೆಗಳ ಹಿಂದೆಯೇ ಈ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ. ಯಾಕೆಂದರೆ ಮನೆಯ ಹೊರಗಡೆ ಹಾಕಲಾಗಿದ್ದ ಪತ್ರಿಕೆಯನ್ನು ಕೂಡ ಮನೆ ಯವರು ತೆಗೆದಿಲ್ಲದಿರುವುದು ಕಂಡುಬಂದಿದೆ.
ಹೊರಗಡೆಯಿಂದ ಬೇರೆ ಯಾರು ಕೂಡ ಬಂದು ಈ ಕೃತ್ಯ ಎಸಗಲು ಸಾಧ್ಯವಿಲ್ಲ. ಯಾಕೆಂದರೆ ಒಳಗೆ ಚಿಲಕ ಹಾಕಿರುವುದು ಕಂಡುಬಂದಿದೆ. ಸುಮಾರು ಎರಡು ಎಕರೆ ಜಾಗದಲ್ಲಿ ಇವರ ಮನೆ ಇರುವುದರಿಂದ ಸುಮಾರು ಒಂದು ಕಿ.ಮೀ.ವರೆಗೆ ಅಲ್ಲಿ ಯಾರ ಮನೆ ಕೂಡ ಇಲ್ಲ. ಮಾನಸಿಕ ಅಸ್ವಸ್ಥರಾಗಿದ್ದ ಇವರು ಕಳೆದ ಐದು ತಿಂಗಳುಗಳಿಂದ ಚಿಕಿತ್ಸೆಗೆ ಹೋಗುತ್ತಿರಲಿಲ್ಲ ಎಂದು ತನಿಖೆ ಯಿಂದ ತಿಳಿದುಬಂದಿದೆ.
ತಜ್ಞರಿಂದ ಮಾದರಿ ಸಂಗ್ರಹ
ಸ್ಥಳಕ್ಕೆ ಆಗಮಿಸಿರುವ ಮಣಿಪಾಲದ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರಾದ ಡಾ.ಅಶ್ವಿನಿ ಕುಮಾರ್, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಅದೇ ರೀತಿ ಮೃತರ ಬಾಯಿಯಲ್ಲಿ ನೊರೆ ಕಂಡುಬಂದಿದೆ. ಆಗಾಗಿ ಈತ ಮೊದಲು ಆಹಾರದಲ್ಲಿ ವಿಷ ಹಾಕಿ ತಿನ್ನಿಸಿ ಬಳಿಕ ಕೊಂದಿರಬಹುದೆ ಎಂಬ ಸಂಶಯ ಮೂಡಿದೆ. ಈ ನಿಟ್ಟಿನಲ್ಲಿ ಮನೆಯಲ್ಲಿದ್ದ ಆಹಾರದ ಮಾದರಿಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.
ಮಣಿಪಾಲ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಾಥಮಿಕ ವರದಿ ಎರಡು ದಿನಗಳಲ್ಲಿ ಕೈಸೇರಲಿದೆ. ಇದರಿಂದ ಈ ಮರಣದ ಕಾರಣ ನಿಖರವಾಗಿ ತಿಳಿದುಬರಲಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಮೂವರು ಮೃತ ಪಟ್ಟಿರುವುದು ಕಂಡುಬಂದಿದೆ. ದೊಣ್ಣೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆಲ ಸಮಯದ ಹಿಂದೆ ಇವರ ವಿರುದ್ಧ ಕೌಟುಂಬಿಕ ದೌರ್ಜನ್ಯ ವಿಚಾರವಾಗಿ ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ಬಂದಿತ್ತು. ಸ್ಥಳದಲ್ಲಿ ಎಲ್ಲೂ ಮರಣ ಪತ್ರ ಸಿಕ್ಕಿಲ್ಲ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.
ಕೃಷಿಕ ಕುಟುಂಬ
ಸುಮಾರು ಎರಡೂವರೆ ಎಕರೆ ಭೂಮಿಯಲ್ಲಿ ಅಡಿಕೆ ಕೃಷಿ ಮಾಡುತ್ತಿದ್ದ ಸೂರ್ಯನಾರಾಯಣ ಅಲ್ಸೆ, ಬೇರೆ ಸಮಯದಲ್ಲಿ ಅಡುಗೆ ಕೆಲಸಕ್ಕೆ ಹೋಗು ತ್ತಿದ್ದರು. ಸುಮಾರು 15 ವರ್ಷಗಳ ಹಿಂದೆ ಮೈಸೂರು ಮೂಲದ ಮಾನಸ ಅವರನ್ನು ವಿವಾಹವಾಗಿದ್ದ ಇವರ ಇಬ್ಬರು ಮಕ್ಕಳು ಹೆಬ್ರಿ ಶಾಲೆಯ ವಿದ್ಯಾರ್ಥಿ ಗಳಾಗಿದ್ದರು. ತನ್ನ ಜಾಗದ ವಿಚಾರದಲ್ಲಿ ಉಂಟಾದ ವಿವಾದದಿಂದ ಇವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರೆನ್ನಲಾಗಿದೆ.