×
Ad

ಸುರತ್ಕಲ್: ಟೋಲ್ ನೀಡದೆ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ; ಆರೋಪಿ ಸೆರೆ

Update: 2019-11-28 21:34 IST

ಮಂಗಳೂರು, ನ.28: ಸುರತ್ಕಲ್ ಸಮೀಪದ ಎನ್‌ಐಟಿಕೆ ಟೋಲ್‌ಗೇಟ್‌ನಲ್ಲಿ ಟೋಲ್ ಹಣ ನೀಡದೇ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪದಲ್ಲಿ ಯುವಕನೋರ್ವನನ್ನು ಮಂಗಳೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕೇರಳದ ಕಾಸರಗೋಡು ನಿವಾಸಿ, ಕಾರು ಚಾಲಕ ರಫೀಕ್ (36) ಬಂಧಿತ ಆರೋಪಿ. ಆರೋಪಿಯಿಂದ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ.
ಗುರುವಾರ ಮಧ್ಯಾಹ್ನ 12:40ಕ್ಕೆ ಸುರತ್ಕಲ್ ಠಾಣೆ ವ್ಯಾಪ್ತಿಯ ಎನ್‌ಐಟಿಕೆ ಟೋಲ್‌ಗೇಟ್‌ನಲ್ಲಿ ಸುರತ್ಕಲ್ ಕಡೆಯಿಂದ ಬಂದ ಕೇರಳದ ಪಾಸಿಂಗ್‌ನ ಕಾರು ಚಾಲಕನು ಟೋಲ್ ನೀಡಲು ನಿರಾಕರಿಸಿದ್ದಾನೆ. ಅಲ್ಲದೆ, ಟೋಲ್ ಸಿಬ್ಬಂದಿ ಮಹಿಳೆ ಜತೆ ವಾದಕ್ಕಿಳಿದಿದ್ದಾನೆ. ಈ ವೇಳೆ ಮತ್ತೋರ್ವ ಸಿಬ್ಬಂದಿ ಯಜ್ಞೇಶ್ ಕರ್ಕೇರಾ ಆರೋಪಿಯಲ್ಲಿ ಟೋಲ್ ಹಣ ನೀಡುವಂತೆ ಕೇಳಿದ್ದು, ಆರೋಪಿಯು ಕಾರಿನ ಒಳಗಿನಿಂದ ಪಿಸ್ತೂಲ್ ತೆಗೆದು, ‘ತಾಕತ್ತಿದ್ದರೆ ತೆಗೆದುಕೊ, ಹತ್ತಿರ ಬಂದರೆ ಕೊಂದು ಹಾಕುತ್ತೇನೆ’ ಎಂದು ಜೀವ ಬೆದರಿಕೆ ಒಡ್ಡಿರುವುದಾಗಿ ದೂರು ದಾಖಲಾಗಿದೆ.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 506 (2) (ಜೀವ ಬೆದರಿಕೆ) ಮತ್ತು ಕಲಂ 25ರ ಇಂಡಿಯನ್ ಆರ್ಮ್ಸ್ ಆ್ಯಕ್ಟ್‌ನಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂಡಲೇ ಕಾರ್ಯ ಪ್ರವೃತ್ತರಾದ ಸುರತ್ಕಲ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಕಾರು ಮತ್ತು ಕೃತ್ಯಕ್ಕೆ ಬಳಸಿದ ಪಿಸ್ತೂಲ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News