ಸಿಬಿಎಸ್‌ಇ ಪರೀಕ್ಷಾ ಶುಲ್ಕ ಏರಿಕೆ: ಇಲ್ಲಿದೆ ನೂತನ ಶುಲ್ಕಗಳ ವಿವರ
ಹೊಸದಿಲ್ಲಿ, ನ.28: ದಿಲ್ಲಿ ಸರಕಾರದ ಶಾಲೆಗಳನ್ನು ಹೊರತುಪಡಿಸಿ ಸಿಬಿಎಸ್‌ಇ 2020ನೇ ಸಾಲಿನ 10 ಮತ್ತು 12ನೇ ತರಗತಿಗಳಿಗೆ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿದ್ದು,ಲಾಭವೂ ಇಲ್ಲ ನಷ್ಟವೂ ಇಲ್ಲ ಎಂಬ ನೀತಿಯನ್ನು ಆಧರಿಸಿ ಈ ಏರಿಕೆಯನ್ನು ಮಾಡಲಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ ಪೋಖ್ರಿಯಾಲ ನಿಶಾಂಕ್ ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ಸಿಬಿಎಸ್‌ಇ ದಿಲ್ಲಿ ಸರಕಾರದ ಶಾಲೆಗಳನ್ನು ಹೊರತುಪಡಿಸಿ ದೇಶಾದ್ಯಂತ ಎಲ್ಲ ಶಾಲೆಗಳಿಗೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ 2020ನೇ ಸಾಲಿಗೆ 10 ಮತ್ತು 12ನೇ ತರಗತಿಯ ಪರೀಕ್ಷಾ ಶುಲ್ಕವನ್ನು 750 ರೂ.ಗಳಿಂದ 1,500 ರೂ.ಗಳಿಗೆ ಹೆಚ್ಚಿಸಿದೆ.
ದಿಲ್ಲಿ ಸರಕಾರದ 1,299 ಶಾಲೆಗಳಿಗೆ ಎಲ್ಲ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ 10ನೇ ತರಗತಿಯ ಪರೀಕ್ಷಾ ಶುಲ್ಕವನ್ನು 375 ರೂ.ಗಳಿಂದ 1,200 ರೂ.ಗಳಿಗೆ ಮತ್ತು 12ನೇ ತರಗತಿಯ ಪರೀಕ್ಷಾ ಶುಲ್ಕವನ್ನು 600 ರೂ.ಗಳಿಂದ 1,200 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ ಸಚಿವರು,ಸಿಬಿಐ ಸ್ವಯಂ ಆರ್ಥಿಕತೆ ಹೊಂದಿದ್ದು,ಸ್ವಾವಲಂಬಿ ಮಂಡಳಿಯಾಗಿದೆ ಮತ್ತು ತನ್ನ ಆದಾಯವನ್ನು ಸ್ವತಃ ಸೃಷ್ಟಿಸಿಕೊಳ್ಳುತ್ತದೆ. ಅದು ತನ್ನ ವೆಚ್ಚಗಳಿಗಾಗಿ ಭಾರತದ ಸಂಚಿತ ನಿಧಿಯಿಂದ ಅಥವಾ ಇತರ ಯಾವುದೇ ಪ್ರಾಧಿಕಾರದಿಂದ ಹಣವನ್ನು ಪಡೆಯುವುದಿಲ್ಲ ಎಂದರು.