ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ; ಆರೋಪಿಗೆ 10 ವರ್ಷಗಳ ಸಜೆ

Update: 2019-11-28 16:33 GMT

ಪುತ್ತೂರು : 5 ವರ್ಷದ ಹಿಂದಿನ ಪೋಕ್ಸೋ ಪ್ರಕರಣದ ಆರೋಪಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಶಂಭುಗ ನಿವಾಸಿ ರಾಜೇಶ್ ಪೂಜಾರಿ (28) ಶಿಕ್ಷೆಗೊಳಗಾದ ಆರೋಪಿ.

ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರು ಆರೋಪಿಗೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ- ರಕ್ಷಣೆ ಕಾಯ್ದೆಯಡಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

ಆರೋಪಿ ರಾಜೇಶ್ ಪೂಜಾರಿ ಬಾಲಕಿಯನ್ನು ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶದಿಂದ ಆಕೆಗೆ ಕೆಲಸ ಮತ್ತು ಬಟ್ಟೆ ಬರೆಗಳನ್ನು ತೆಗೆಸಿಕೊಡುವ ಆಸೆ ಹುಟ್ಟಿಸಿ,ಆಮಿಷಕ್ಕೊಳಪಡಿಸಿ ಬೆಂಗಳೂರಿಗೆ ಕರೆದು ಕೊಂಡು ಹೋಗಿ ಅಲ್ಲಿ ಕೊಠಡಿಯೊಂದರಲ್ಲಿ ಇರಿಸಿಕೊಂಡು ಆಕೆಯ ಇಚ್ಛೆಗೆ ವಿರುದ್ಧವಾಗಿ ಮತ್ತು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ದೂರಲಾಗಿತ್ತು. 

ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಪೊಲೀಸರು ಬಾಲಕಿ ಹಾಗೂ ಆರೋಪಿ ರಾಜೇಶ್ ಪೂಜಾರಿ ಬೆಂಗಳೂರಿನಲ್ಲಿರುವುದನ್ನು, ಆತನ ಮೊಬೈಲ್ ನೆಟ್‍ವರ್ಕ್ ಜಾಲಾದ ಮೂಲಕ ಪತ್ತೆ ಮಾಡಿದ್ದರು. ಬಳಿಕ ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಕೊಠಡಿಯೊಂದರಲ್ಲಿದ್ದ ಬಾಲಕಿಯನ್ನು ಆರೋಪಿಯ ಜತೆಗೆ ಪತ್ತೆ ಮಾಡಿ ಪುತ್ತೂರು ನಗರ ಠಾಣೆಗೆ ಕರೆ ತಂದಿದ್ದರು. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಆಗಿನ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಕೆ. ಮಂಜಯ್ಯ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಈ ಪ್ರಕರಣ ಇತ್ತೀಚೆಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಪುಷ್ಪರಾಜ್ ಅಡ್ಯಂತಾಯ ಅವರು  ಅಭಿಯೋಜನ ಪರವಾಗಿ 25 ಸಾಕ್ಷಿಗಳ ಪೈಕಿ 18 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದು ಕೊಂಡಿದ್ದರು. ಅವರ ವಾದವನ್ನು ಪುರಸ್ಕರಿಸಿರುವ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರು ಇದೀಗ ಆರೋಪಿಗೆ ಜೈಲು ಶಿಕ್ಷೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News