×
Ad

ಸುರತ್ಕಲ್ ಅಕ್ರಮ ಟೋಲ್‌ಗೇಟ್ ಸಂಸದ ನಳಿನ್‌ಗೆ ದೊಡ್ಡ ಕಳಂಕ: ಮುನೀರ್ ಕಾಟಿಪಳ್ಳ ಆರೋಪ

Update: 2019-11-28 22:11 IST

ಮಂಗಳೂರು, ನ.28: ಗುತ್ತಿಗೆ ನವೀಕರಿಸಲಾಗುವುದಿಲ್ಲ ಎಂಬ ಭರವಸೆ ನೀಡಲಾಗಿದ್ದ, ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿ ಸುತ್ತಿರುವ ಸುರತ್ಕಲ್ ಅಕ್ರಮ ಟೋಲ್ ಗೇಟ್‌ನ ಗುತ್ತಿಗೆಯನ್ನು ಮತ್ತೆ ನವೀಕರಿಸಿರುವುದು ಸಂಸದ ನಳಿನ್ ಕುಮಾರ್ ಅವರಿಗೆ ದೊಡ್ಡ ಕಳಂಕ ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಕ್ರಮ ಟೋಲ್‌ಗೇಟ್‌ನ ಗುತ್ತಿಗೆ ನವೀಕರಿಸಿರುವುದಲ್ಲದೆ, ಫಾಸ್ಟ್ ಟ್ಯಾಗ್ ಕಡ್ಡಾಯ ಹೆಸರಿನಲ್ಲಿ ಸ್ಥಳೀಯ ವಾಹನಗಳ ರಿಯಾಯಿತಿಯನ್ನು ರದ್ದುಗೊಳಿಸಲು ಮುಂದಾಗಿರುವ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರ ಕ್ರಮವನ್ನು ವಿರೋಧಿಸುವುದಾಗಿ ಹೇಳಿದರು.

ಸ್ಥಳೀಯ ವಾಹನಗಳಿಂದ ಸುಂಕ ವಸೂಲಿಗೆ ಮುಂದಾದರೆ ಡಿಸೆಂಬರ್ 1ರಿಂದ ಟೋಲ್ ಗೇಟ್ ಸ್ಥಗಿತಗೊಳಿಸಿ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.

ಸುರತ್ಕಲ್‌ನ ಅಕ್ರಮ ಟೋಲ್‌ಗೇಟ್ ವಿರದ್ಧು 2018ರ ಜನವರಿಯಲ್ಲಿ ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡ ತೀರ್ಮಾನದ ಪ್ರಕಾರ ಹೆಜಮಾಡಿ ಟೆಲ್ ಜತೆಗೆ ವಿಲೀನಗೊಳಿಸಬೇಕಿತ್ತು. ಆದರೆ ಟೋಲ್ ಗುತ್ತಿಗೆ ಲಾಬಿಗಳು, ಭ್ರಷ್ಟ ಅಧಿಕಾರಿ, ರಾಜಕಾರಣಿಗಳ ದುಷ್ಟಕೂಟದಿಂದ ಹಲವು ಸುತ್ತಿನ ಹೋರಟಾದ ಹೊರತಾಗಿಯೂ ಟೋಲ್‌ಗೇಟ್ ವಿಲೀನ ನಿರ್ಧಾರ ಕಾರ್ಯರೂಪಕ್ಕೆ ಬರುತ್ತಿಲ್ಲ. ಹೋರಾಟದ ಸಂದರ್ಭ ಸ್ಥಳೀಯ ಶಾಸಕರು ಕೂಡಾ ಸ್ಥಳೀಯರಿಗೆ ಟೋಲ್ ಕಡ್ಡಾಯಗೊಳಿಸಿದರೆ ಟೋಲ್ ಒಡೆಯುವುದಾಗಿ ಹೇಳಿದ್ದರು. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಈ ಬಗ್ಗೆ ಸಂಸದರು ಹಾಗೂ ಶಾಸಕರು ಸೂಕ್ತ ಕ್ರಮ ಕೈಗೊಳ್ಳಬೇಕು. ಬಲವಂತದ ವಸೂಲಿಗೆ ಮುಂದಾದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಅವರು ಹೇಳಿದರು.

ಹೆದ್ದಾರಿಗಳನ್ನು ವ್ಯವಸ್ಥಿತಗೊಳಿಸದೆ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಮುಂದಾಗಿರುವುದು ಹಾಸ್ಯಾಸ್ಪದ. ಇದು ವಾಹನ ಸವಾರರನ್ನು ಪ್ರತಿರೋಧವಿಲ್ಲದೆ ಟೋಲ್ ಪಾವತಿಸುವಂತೆ ಮಾಡುವ ತಂತ್ರ ಹಾಗೂ ಖಾಸಗಿ ಬ್ಯಾಂಕ್‌ಗಳ, ಟೋಲ್ ಗುತ್ತಿಗೆದಾರರ ತಿಜೋರಿ ತುಂಬುವ ಕಾರ್ಯತಂತ್ರ ಎಂದು ಅವರು ಆರೋಪಿಸಿದರು.

ಸುರತ್ಕಲ್ ಟೋಲ್‌ಗೇಟ್ ಹೆಜಮಾಡಿ ಟೋಲ್ ಗೇಟ್ ಜತೆಗೆ ವಿಲೀನಗೊಳಿಸುವ ನಿರ್ಧಾರ ಜಾರಿಯಾಗುವವರೆಗೆ ಸ್ಥಳೀಯ ವಾಹನಗಳ ರಿಯಾಯಿತಿ ಮುಂದುವರಿಸಬೇಕು. ಇಲ್ಲವಾದರೆ ಡಿಸೆಂಬರ್ 1ರಿಂದ ಟೋಲ್ ಸಂಗ್ರಹ ಸ್ಥಗಿತಗೊಳಿಸಿ ಹೋರಾಟ ನಡೆಸುವುದಾಗಿ ಅವರು ಹೇಳಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ, ಶೇಖರ ಹೆಜಮಾಡಿ, ವಸಂತ ಬೆರ್ನಾಡ್, ಶಶಿಧರ ಅಮೀನ್, ನೂರುಲ್ಲಾ, ಸಾದಿಕ್ ಬೆಂಗ್ರೆ, ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News