ನ. 30: ಪುತ್ತೂರು ಕ್ಯಾಂಪ್ಕೋ ಕಟ್ಟಡದಲ್ಲಿ ಜನೌಷಧಿ ಕೇಂದ್ರ ಉದ್ಘಾಟನೆ

Update: 2019-11-28 16:44 GMT

ಪುತ್ತೂರು : ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಪಾಲಿಟೆಕ್ನಿಕ್ ಹಾಗೂ ಕ್ಯಾಂಪ್ಕೋ ಸಂಸ್ಥೆಯ ಸಹಯೋಗದಲ್ಲಿ ಪುತ್ತೂರಿನ ಎಂ.ಟಿ. ರಸ್ತೆಯ ಬಳಿಯಲ್ಲಿರುವ ಕ್ಯಾಂಪ್ಕೋ ಕಟ್ಟಡದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ನ.30ರಂದು ಬೆಳಗ್ಗೆ ಉದ್ಘಾಟನೆಗೊಳ್ಳಲಿದೆ ಎಂದು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ರಾಜ್ಯದ ಹಿರಿಯ ಮಾರುಕಟ್ಟೆ ಅಧಿಕಾರಿ ಡಾ.ಅನಿಲಾ ದೀಪಕ್ ಅವರು  ತಿಳಿಸಿದ್ದಾರೆ.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ 602 ಜನೌಷಧಿ ಕೆಂದ್ರಗಳು ಕಾರ್ಯಾಚರಿತಿಸುತ್ತಿದೆ. ಪುತ್ತೂರು ವ್ಯಾಪ್ತಿಯಲ್ಲಿ ಕಬಕವನ್ನು ಹೊರತು ಪಡಿಸಿ ಇದು ಮೂರನೇ ಕೇಂದ್ರವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಈ ಮಹಾತ್ವಾಕಾಂಕ್ಷಿ ಯೋಜನೆಯ ಪ್ರಯೋಜನ ಎಲ್ಲರಿಗೂ ತಲುಪುವಂತಾಗಬೇಕು ಎಂಬ ಉದ್ದೇಶದಿಂದ ಪ್ರತೀ ಕಡೆಗಳಲ್ಲಿ ಕೇಂದ್ರ ತೆರಯಲಾಗುತ್ತಿದೆ. ಶೇ.70ಕ್ಕಿಂತಲೂ ಅತೀ ಕಡಿಮೆ ದರದಲ್ಲಿ ಲಭ್ಯವಾಗುವ ಶ್ರೇಷ್ಠ ಗುಣಮಟ್ಟದ ಜನೌಷಧಿ ಬಗ್ಗೆ ಜನ ಸಾಮಾನ್ಯರಿಗೆ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ ಎಂದರು.

ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ ಅವರು ಮಾತನಾಡಿ ಜನೌಷಧಿ ಕೆಂದ್ರವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಉದ್ಘಾಟಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್‍ಕುಮಾರ್ ಕಟೀಲು, ಶಾಸಕ ಸಂಜೀವ ಮಠಂದೂರು, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ವಿವೇಕಾನಂದ ಪಾಲಿಟೆಕ್ನಿಕ್ ಅಧ್ಯಕ್ಷ ಪ್ರಸನ್ನ ಎನ್.ಭಟ್, ಜನೌಷಧಿ ಪರಿಯೋಜನೆಯ ರಾಜ್ಯದ ಹಿರಿಯ ಮಾರುಕಟ್ಟೆ ಅಧಿಕಾರಿ ಡಾ.ಅನಿಲಾ ದೀಪಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ವಿವೇಕಾನಂದ ಪಾಲಿಟೆಕ್ನಿಕ್ ಸಂಚಾಲಕ ಸಿ.ಮಹಾದೇವ ಶಾಸ್ತ್ರಿ ಅವರು ಮಾತನಾಡಿ ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಪಾಲಿಟೆಕ್ನಿಕ್ 10 ಕಡೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ವ್ಯವಸ್ಥೆ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದು, ಈಗಾಗಲೇ ಸುಳ್ಯ,ಕಬಕ, ಕಡಬ,ಮೆಲ್ಕಾರ್, ಕಾಸರಗೋಡು, ಕೊಡಾಜೆ ಸೇರಿದಂತೆ 8 ಕಡೆಗಳಲ್ಲಿ ಆರಂಭವಾಗಿದೆ. ಜನೌಷಧಿ ಕೇಂದ್ರಗಳನ್ನು ತೆರೆಯುವವರಿಗೆ ಮಾಹಿತಿಯ ಜತೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವಲ್ಲಿ ಸಹಕರಿಸಿದೆ. ಬೆಳ್ಳಾರೆ ಮತ್ತು ನಿಂತಿಕಲ್‍ನಲ್ಲಿ ಜನೌಷಧಿ ಕೇಂದ್ರ ತೆರೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಕೆಲವೊಂದು ಜನೌಷಧಿ ಕೇಂದ್ರಗಳಲ್ಲಿ ಹೆಚ್ಚಿನ ಔಷಧಿಗಳು ಸಿಗುತ್ತಿಲ್ಲ ಎಂಬ ಕೊರಗಿದೆ. ಆದರೆ ನಾವು ಎಲ್ಲಾ ಬಗೆಯ ಔಷಧಿಗಳನ್ನು ತರಿಸಿಕೊಳ್ಳುವ ಜತೆಗೆ ಜನತೆಗೆ ಉತ್ತಮ ಸೇವೆ ನೀಡುವ ಮೂಲಕ ಮೂರು ತಿಂಗಳೊಳಗೆ ನಮ್ಮ ಜನೌಷಧಿ ಕೇಂದ್ರವನ್ನು ಮಾದರಿ ಕೇಂದ್ರವಾಗಿ ಮಾಡಿ ತೋರಿಸುತ್ತೇವೆ ಎಂದು ಜನೌಷಧಿ ಕೇಂದ್ರದ ಮಾಲಕ ಶಿವರಂಜನ್ ಎಂ. ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News