ಸುಪ್ರೀಂಕೋರ್ಟ್ ಪರೀಕ್ಷೆಯಲ್ಲಿ ಅಝ್ಮತ್ ಅಮಾನುಲ್ಲಾ ಟಾಪರ್
ಹೊಸದಿಲ್ಲಿ, ನ.28: 2018ರಲ್ಲಿ ನಡೆದ ಸುಪ್ರೀಕೋರ್ಟ್‌ನ ನ್ಯಾಯವಾದಿಗಳಿಗಾಗಿನ ಅಡ್ವಕೇಟ್ ಆನ್ ರೆಕಾರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಅಝ್ಮತ್ ಹಯಾತ್ ಅಮಾನುಲ್ಲಾ ಅವರಿಗೆ ಭಾರತದ ಮುಖ್ಯ ನ್ಯಾಯಾಧೀಶ ಎಸ್.ಎ. ಬೊಬ್ಡೆ ಅವರು ಗುರುವಾರ ಚಿನ್ನದ ಪದಕ ಪ್ರದಾನ ಮಾಡಿದರು.
ದಿವಂಗತ ಐಎಫ್‌ಎಸ್ ಅಧಿಕಾರಿ, ಸಂಸತ್ ಸದಸ್ಯ ಹಾಗೂ ಬರಹಗಾರ ಸೈಯದ್ ಶಹಾಬುದ್ದೀನ್ ಅವರ ಮೊಮ್ಮಗನಾಗಿರುವ ಅಝ್ಮತ್ ಅವರು ಮಾಜಿ ಐಎಎಸ್ ಅಧಿಕಾರಿ ಅಫ್ಝಲ್ ಅಮಾನುಲ್ಲಾ ಹಾಗೂ ಬಿಹಾರದ ಮಾಜಿ ಸಚಿವೆ ಪರ್ವೀನ್ ಅಮಾನುಲ್ಲಾ ಅವರ ಪುತ್ರ.
ಸಂವಿಧಾನದ ದಿನವಾದ ಪ್ರಯುಕ್ತ ನವೆಂಬರ್ 26ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಝ್ಮತ್ ಅವರು ಸಿಜೆಐ ಅವರಿಂದ ಪುರಸ್ಕಾರವನ್ನು ಸ್ವೀಕರಿಸಿದರು.
‘‘ಭಗವಂತನ ಅನಂತ ಅನುಗ್ರಹದಿಂದಾಗಿ ಸಂವಿಧಾನ ದಿನಂದು ನನ್ನ ಪುತ್ರ ಅಝ್ಮತ್ ಅಡ್ವಕೇಟ್ ಆನ್ ರೆಕಾರ್ಡ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದು,ಸಿಜೆಐ ಅವರಿಂದ ಪುರಸ್ಕಾರ ಪಡೆದಿದ್ದಾನೆ’’ ಎಂದು ಅಮಾನುಲ್ಲಾ ಅವರು ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.
ಅಝ್ಮತ್ ಅವರು ಪುಣೆಯಲ್ಲಿನ ಭಾರತೀಯ ಕಾನೂನು ವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ಜಮೀನು, ಸೇವಾ ವಿಷಯಗಳು,ಗ್ರಾಹಕ, ಆಸ್ತಿ, ಕಾರ್ಮಿಕ, ಉದ್ಯೋಗ, ಕೈಗಾರಿಕಾ ವ್ಯಾಜ್ಯಗಳು ಹಾಗೂ ಕಾರ್ಮಿಕ ಪರಿಹಾರಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಪರಿಣಿತರಾಗಿದ್ದಾರೆ.
ಅಡ್ವಕೇಟ್ಸ್ ಆನ್ ರೆಕಾರ್ಡ್ ಪರೀಕ್ಷೆಯನ್ನು ಸುಪ್ರೀಂಕೋರ್ಟ್ ಆಯೋಜಿಸುತ್ತದೆ. ಅಡ್ವಕೇಟ್ಸ್ ಆನ್ ರೆಕಾರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮಾತ್ರ ಸುಪ್ರೀಂಕೋರ್ಟ್‌ನಲ್ಲಿ ತಮ್ಮ ಕಕ್ಷಿದಾರರ ಪರವಾಗಿ ದಾವೆಯನ್ನು ಹೂಡಲು ಅರ್ಹರಾಗುತ್ತಾರೆ.