ಮನೆಗೆ ನುಗ್ಗಿ ಕಳವು ಪ್ರಕರಣ : ಆರೋಪಿ ಸೆರೆ

Update: 2019-11-28 17:57 GMT

ಉಪ್ಪಿನಂಗಡಿ: ಒಂಟಿ ಮಹಿಳೆಯ ಮನೆಗೆ ನುಗ್ಗಿ ಮನೆಯಿಂದ ಎರಡು ಮೊಬೈಲ್ ಫೋನ್ ಹಾಗೂ ಮನೆಯ ಹೊರಗೆ ನಿಲ್ಲಿಸಿದ್ದ  ಕಾರು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಕ್ಕಡದ ಆರ ನಿವಾಸಿ ಪ್ರವೀಣ್ ಕುಮಾರ್ ಬಂಧಿತ ಆರೋಪಿ.

ನೆಲ್ಯಾಡಿಯ ಪಡ್ಡಡ್ಕ ನಿವಾಸಿ  ಸುನೀತಾ ಎಂಬವರ ಮನೆಯಿಂದ ಎರಡು ಮೊಬೈಲ್ ಫೋನ್ ಹಾಗೂ ಮಾರುತಿ ಅಲ್ಟೋ ಕಾರು ಕಳವಾಗಿರುವುದು ಬಗ್ಗೆ ನ. 27ರಂದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸಿ, ಕಳವು ಪ್ರಕರಣದ ಆರೋಪಿ ಪ್ರವೀಣ್ ಕುಮಾರ್ ನನ್ನು ಗುಂಡ್ಯ ಚೆಕ್‍ಪೋಸ್ಟ್‍ನಲ್ಲಿ ಕಾರು ಸಮೇತ  ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತನಿಂದ ಕಾರು ಹಾಗೂ ಎರಡು ಮೊಬೈಲ್ ಫೋನ್ ಸೇರಿದಂತೆ ಒಟ್ಟು 2,90,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಮನೆಯೊಳಗೆ ಅಡಗಿ ಕುಳಿತ್ತಿದ್ದ ಆರೋಪಿ: ಲಾರಿ ಚಾಲಕನಾಗಿರುವ ಸುನೀತಾ ಅವರ ಪತಿ ಕಾರ್ಯ ನಿಮಿತ್ತ ತೆರಳಿದ್ದು, ಸುನೀತಾ ಮಾತ್ರ ಮನೆಯಲ್ಲಿದ್ದರು. ನ.26ರ ರಾತ್ರಿ ಮನೆಯ ಹಿಂಬದಿ ಬಾಗಿಲು ತೆರೆದಿಟ್ಟಿದ್ದ ಸಂದರ್ಭ ಮನೆಯೊಳಗೆ ಸೇರಿ ಕೊಂಡಿದ್ದ ಪ್ರವೀಣ್ ಕುಮಾರ್ ಅಡಗಿ ಕುಳಿತ್ತಿದ್ದ. ಮನೆಯೊಳಗೆ ಅವಿತಿರುವುದನ್ನು ಅರಿಯದೇ ಸುನೀತಾ ಅವರು ನಿದ್ದೆ ಮಾಡಿದ್ದ ಸಂದರ್ಭ ಮನೆಯೊಳಗಿದ್ದ ಎರಡು ಮೊಬೈಲ್ ಹಾಗೂ ಕಾರಿನ ಕೀ ಎಗರಿಸಿ, ಕಾರಿನೊಂದಿಗೆ ಪರಾರಿಯಾಗಿದ್ದ. ನ.27ರಂದು ಕಳವು ಪ್ರಕರಣ ಬೆಳಕಿಗೆ ಬಂದಿತ್ತು.

ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಅವರ ನೇತೃತ್ವದಲ್ಲಿ ನಡೆದ ಈ ತನಿಖಾ ಕಾರ್ಯದಲ್ಲಿ ಉಪ್ಪಿನಂಗಡಿ ಹಾಗೂ ನೆಲ್ಯಾಡಿ ಹೊರ ಠಾಣೆಯ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News