ಹೊಸ ದಾಖಲೆ: ಒಂದೇ ಓವರ್ ನಲ್ಲಿ 5 ವಿಕೆಟ್ ಗಳಿಸಿದ ಭಾರತದ ಬೌಲರ್!

Update: 2019-11-29 13:29 GMT

ಸೂರತ್, ನ.29:ಹರಿಯಾಣ ವಿರುದ್ಧ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಸೂಪರ್ ಲೀಗ್ ಸೆಮಿಫೈನಲ್‌ನಲ್ಲಿ ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಒಂದೇ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಉಡಾಯಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಮಿಥುನ್ ನೆರವಿನಲ್ಲಿ ಈ ಪಂದ್ಯದಲ್ಲಿ ಹರ್ಯಾಣವನ್ನು 8 ವಿಕೆಟ್‌ಗಳ ಅಂತರದಲ್ಲಿ ಸೋಲಿಸಿರುವ ಕರ್ನಾಟಕ ಫೈನಲ್ ಪ್ರವೇಶಿಸಿದೆ.

ಸೂರತ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 195 ರನ್ ಗಳಿಸಬೇಕಿದ್ದ ಕರ್ನಾಟಕ ತಂಡ15 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 195 ರನ್ ಗಳಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ 66ರನ್(31ಎ, 4ಬೌ, 6ಸಿ), ದೇವದತ್ತ ಪಡಿಕ್ಕಲ್ 87ರನ್(42ಎ, 11ಬೌ, 4ಸಿ), ಮಾಯಾಂಕ್ ಅಗರ್ವಾಲ್ ಔಟಾಗದೆ 30 ರನ್(14ಎ, 3ಸಿ) ಮತ್ತು ಮನೀಷ್ ಪಾಂಡೆ ಔಟಾಗದೆ 3ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹರ್ಯಾಣ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 194 ರನ್ ಗಳಿಸಿತ್ತು. *ಮೂರನೇ ಹ್ಯಾಟ್ರಿಕ್ ಮಿಥುನ್ ತನ್ನ ಆರಂಭಿಕ ಮೂರು ಓವರ್‌ಗಳಲ್ಲಿ 37 ರನ್‌ಗಳನ್ನು ಬಿಟ್ಟುಕೊಟ್ಟರು ಆದರೆ ಇನಿಂಗ್ಸ್‌ನ ಕೊನೆಯ ಓವರ್‌ನ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಎಗರಿಸುವುದರ ಮೂಲಕ ಹ್ಯಾಟ್ರಿಕ್ ಗಳಿಸಿದರು. ಐದನೇ ಎಸೆತ ವೈಡ್ ಆಗಿತ್ತು. ಮುಂದಿನ ಎಸೆತದಲ್ಲಿ 1 ರನ್ ಬಿಟ್ಟುಕೊಟ್ಟರು. ಅಂತಿಮ ಎಸೆತದಲ್ಲಿ ಇನ್ನೊಂದು ವಿಕೆಟ್ ಎಗರಿಸಿ ಒಂದೇ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು. ಉತ್ತಮವಾಗಿ ಆಡುತ್ತಿದ್ದ ಹಿಮಾಂಶು ರಾಣಾ(61ರನ್, 34ಎ, 6ಬೌ, 2ಸಿ) ಅವರು 20ನೇ ಓವರ್‌ನಲ್ಲಿ ಮಿಥುನ್‌ರ ಮೊದಲ ಎಸೆತದಲ್ಲಿ ಮಾಯಾಂಕ್ ಅಗರ್ವಾಲ್‌ಗೆ ಕ್ಯಾಚ್ ನೀಡಿದರು. 2ನೇ ಎಸೆತದಲ್ಲಿ ರಾಹುಲ್ ಟೆವಾಟಿಯಾ (32) ಅವರು ಕರುಣ್ ನಾಯರ್‌ಗೆ ಕ್ಯಾಚ್ ನೀಡಿದರು.

ಮೂರನೇ ಎಸೆತದಲ್ಲಿ ಸುಮಿತ್ ಕುಮಾರ್ (0) ಅವರು ರೋಹನ್ ಕದಮ್‌ಗೆ ಕ್ಯಾಚ್ ನೀಡಿದರು ಇದರೊಂದಿಗೆ ಮಿಥುನ್ ಹ್ಯಾಟ್ರಿಕ್ ಗಳಿಸಿದರು. ನಾಯಕ ಅಮಿತ್ ಮಿಶ್ರಾ (0) ಎದುರಿಸಿದ ಮೊದಲ ಎಸೆತದಲ್ಲಿ ಗೌತಮ್‌ಗೆ ಕ್ಯಾಚ್ ನೀಡಿ ಬಂದ ದಾರಿಯಲ್ಲೇ ವಾಪಸಾದರು. ಐದನೇ ಎಸೆತ ವೈಡ್ ಆಗಿತ್ತು ಮುಂದಿನ ಎಸೆತದಲ್ಲಿ ಜಿತೇಶ್ ಸರೋಹಾ 1 ರನ್ ಗಳಿಸಿದರು. ಅಂತಿಮ ಎಸೆತದಲ್ಲಿ ಜಯಂತ್ ಯಾದವ್ (0) ಅವರು ರಾಹುಲ್‌ಗೆ ಕ್ಯಾಚ್ ನೀಡಿದರು. ಮಿಥುನ್ 39ಕ್ಕೆ 5 ವಿಕೆಟ್ ಪಡೆದರು. ಒಂದು ಹಂತದಲ್ಲಿ ಹರ್ಯಾಣ 19ನೇ ಓವರ್‌ನ ಮುಕ್ತಾಯಕ್ಕೆ 3 ವಿಕೆಟ್ ನಷ್ಟದಲ್ಲಿ 192 ರನ್ ಗಳಿಸಿತ್ತು. ಆದರೆ . ಅಂತಿಮ ಓವರ್‌ನಲ್ಲಿ ಅಭಿಮನ್ಯು ಮಿಥುನ್ ಪ್ರಹಾರಕ್ಕೆ ಸಿಲುಕಿ ಕೇವಲ 2 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕೈ ಚೆಲ್ಲಿತು. ಮಿಥುನ್ ಸಾಧನೆ 39 ಕ್ಕೆ 5 ವಿಕೆಟ್(4-0-39-5) ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಬೌಲರ್ ಒಬ್ಬ ಓವರ್‌ನಲ್ಲಿ ಐದು ವಿಕೆಟ್ ಪಡೆದ ಎರಡನೇ ಉದಾಹರಣೆಯಾಗಿದೆ. ಆರು ವರ್ಷಗಳ ಹಿಂದೆ ನಡೆದ ದೇಶೀಯ ಟ್ವೆಂಟಿ-20 ಪಂದ್ಯದಲ್ಲಿ ಬಾಂಗ್ಲಾದೇಶದ ಬೌಲರ್ ಅಲ್ ಅಮೀನ್ ಹುಸೈನ್ ಈ ಸಾಧನೆ ಮಾಡಿದ್ದಾರೆ.

ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೇರಿದಂತೆ ಭಾರತದ ಮೂರು ದೇಶೀಯ ಪಂದ್ಯಾವಳಿಗಳಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಆಟಗಾರ ಮಿಥುನ್. ಈ ವರ್ಷ ಕರ್ನಾಟಕದ ವಿಜಯ ಹಜಾರೆ ಟ್ರೋಫಿ ಫೈನಲ್‌ನಲ್ಲಿ ಮಿುನ್ ಹ್ಯಾಟ್ರಿಕ್ ಕೂಡ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News