×
Ad

ಬ್ರಾಹ್ಮಣಶಾಹಿ ವಿರುದ್ಧ ಜನಜಾಗೃತಿ ‌ಅತ್ಯಗತ್ಯ: ಪ್ರೊ.‌ ವಿಲಾಸ್ ಖಾರತ್

Update: 2019-11-29 19:09 IST

ಮಂಗಳೂರು, ನ. 29: ದೇಶದ‌ ಶೇ. 85ರಷ್ಟಿರುವ ಮೂಲನಿವಾಸಿಗಳ ಮೇಲೆ ಶೇ. 3.5ರಷ್ಟಿರುವ ಬ್ರಾಹ್ಮಣರು ಪ್ರಭುತ್ವ ಸಾಧಿಸುತ್ತಿದ್ದಾರೆ. ಇದರ ಫಲವಾಗಿಯೇ ಇಂದು ದೇಶಾದ್ಯಂತ ಸಮಸ್ಯೆಗಳ ಸರಮಾಲೆ ಸೃಷ್ಟಿಯಾಗುತ್ತಿದೆ ಎಂದು ಬಹುಜನ ಕ್ರಾಂತಿ ಮೋರ್ಚಾದ ರಾಷ್ಟ್ರೀಯ ಸಂಚಾಲಕ ಪ್ರೊ. ವಿಲಾಸ್ ಖಾರತ್  ಹೇಳಿದರು.

ನಗರದ ಕಂಕನಾಡಿಯ ಜಂ‌ಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ‌ ಬಹುಜನ ಕ್ರಾಂತಿ ಮೋರ್ಚಾದ ವತಿಯಿಂದ ಶುಕ್ರವಾರ ನಡೆದ "ಪ್ರಜಾಪ್ರಭುತ್ವದ ಉಳಿವಿಗಾಗಿ ಮತ್ತು ಇವಿಎಂ ತೊಲಗಿಸಿ ಹಾಗೂ ಬ್ಯಾಲೆಟ್ ಪೇಪರ್ ಜಾರಿಗೊಳಿಸಬೇಕು" ಎಂಬ  ಪರಿವರ್ತನಾ ಯಾತ್ರೆಯ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದ ಎಲ್ಲಾ ರಂಗಗಳಲ್ಲೂ‌ ವಿದೇಶಿ ಮೂಲದ ಬ್ರಾಹ್ಮಣರು ನಿಯಂತ್ರಣ ಸಾಧಿಸುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವಕ್ಕೆ ಮುನ್ನ ಇಲ್ಲಿನ ಮೂಲನಿವಾಸಿಗಳು ಯಾವೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದರೋ ಸ್ವಾತಂತ್ರ್ಯದ ಬಳಿಕವೂ ಅದೇ ಸಮಸ್ಯೆಗಳೇ ಸವಾಲಾಗಿ‌ ಪರಿಣಮಿಸಿವೆ. ವಿದೇಶೀ ಮೂಲದ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದರೂ ವಿದೇಶೀ ಮೂಲದ ಬ್ರಾಹ್ಮರೇ ಅಧಿಕಾರದ ಚುಕ್ಕಾಣಿ ಹಿಡಿದು ಮೂಲನಿವಾಸಿಗಳನ್ನು ಗುಲಾಮರನ್ನಾಗಿಸಿದರು ಎಂದು ವಿಲಾಸ್ ಖಾರತ್ ನುಡಿದರು.

ಇವಿಎಂ ಜಾರಿಗೊಳಿಸುವಿಕೆಯ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಸಮಾನ ಭಾಗಿಗಳಾಗಿವೆ. ಅದರ ಹಿಂದೆ ದೊಡ್ಡ ಲಾಬಿ ಇದೆ.  ಇವಿಎಂ ಅನ್ನು ಭಾರತಕ್ಕೆ ಪರಿಚಯಿಸಿದ್ದೇ ಕಾಂಗ್ರೆಸ್. ಆದರೆ ಬಹುತೇಕರಿಗೆ ಆ ಬಗ್ಗೆ ಅರಿವಿಲ್ಲ. ವಾಸ್ತವ ಸಂಗತಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಪರಿವರ್ತನೆಗೊಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ದೇಶದ ಮೂಲ ನಿವಾಸಿಗಳಾದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು ಒಂದಾಗಬೇಕು. ಬ್ರಾಹ್ಮಣ ಶಾಹಿಯ ವಿರುದ್ಧ ಸೆಟೆದು ನಿಲ್ಲಬೇಕು ಎಂದು ವಿಲಾಸ್ ಖಾರತ್ ಹೇಳಿದರು.

ಸಭೆಯಲ್ಲಿ ಬಹುಜನ‌ ಕ್ರಾಂತಿ ಮೋರ್ಚಾದ ಮುಖಂಡರಾದ ಅಬ್ದುಲ್ ಅಝೀಝ್, ಮುಹಮ್ಮದ್ ತೌಫೀಕ್, ಅನೀಶ್ ಕಾಂಬ್ಳೆ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News