ಉಯಿಘರ್ ಮುಸ್ಲಿಮರ ಮೇಲೆ ದೌರ್ಜನ್ಯ: ‘ಟಿಕ್‌ಟಾಕ್‌’ ಬಗ್ಗೆ ಆಘಾತಕಾರಿ ವರದಿ ಬಹಿರಂಗ

Update: 2019-11-29 15:38 GMT
ಸಾಂದರ್ಭಿಕ ಚಿತ್ರ

ಬೀಜಿಂಗ್, ನ. 29: ಚೀನಾದ ಪಶ್ಚಿಮದ ಕ್ಸಿನ್‌ಜಿಯಾಂಗ್ ವಲಯದಲ್ಲಿರುವ ಉಯಿಘರ್ ಮುಸ್ಲಿಮರ ಮೇಲೆ ನಿಗಾ ಇಡುವುದಕ್ಕಾಗಿ ಟಿಕ್‌ಟಾಕ್‌ನ ಮಾತೃ ಕಂಪೆನಿ ಬೈಟ್‌ಡ್ಯಾನ್ಸ್ ಮತ್ತು ವಾವೇ ಟೆಕ್ನಾಲಜೀಸ್ ಸೇರಿದಂತೆ ಚೀನಾದ ಬೃಹತ್ ತಂತ್ರಜ್ಞಾನ ಕಂಪೆನಿಗಳು ಚೀನಾ ಕಮ್ಯುನಿಸ್ಟ್ ಪಾರ್ಟಿಯ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿವೆ ಎಂದು ಗುರುವಾರ ಪ್ರಕಟಗೊಂಡ ವರದಿಯೊಂದು ಹೇಳಿದೆ.

ಅಮೆರಿಕದ ಹದಿಹರಯದ ಹುಡುಗಿಯೊಬ್ಬರ ಖಾತೆಯನ್ನು ಟಿಕ್‌ಟಾಕ್ ಮುಚ್ಚಿದ ಕೆಲವೇ ದಿನಗಳಲ್ಲಿ, ಚೀನಾದ ಭದ್ರತಾ ವ್ಯವಸ್ಥೆ ಮತ್ತು ಆ ದೇಶದ ಬೃಹತ್ ತಂತ್ರಜ್ಞಾನ ಕಂಪೆನಿಗಳ ನಡುವಿನ ನಂಟಿಗೆ ಸಂಬಂಧಿಸಿದ ಹೊಸ ಸಾಕ್ಷಗಳು ಬಹಿರಂಗಗೊಂಡಿವೆ. ಅಮೆರಿಕದ ಹದಿಹರಯದ ಹುಡುಗಿಯು ತನ್ನ ಟಿಕ್‌ಟಾಕ್ ವೀಡಿಯೊದ ಆರಂಭದಲ್ಲಿ ಮೇಕಪ್ ಮಾಡುವುದು ಹೇಗೆ ಎನ್ನುವುದನ್ನು ತೋರಿಸುತ್ತಾರೆ ಹಾಗೂ ಬಳಿಕ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಚಿನಾ ನಡೆಸುತ್ತಿದೆಯೆನ್ನಲಾದ ಮಾನವಹಕ್ಕುಗಳ ಉಲ್ಲಂಘನೆ ಬಗ್ಗೆ ವಿವರಣೆಯನ್ನು ನೀಡುತ್ತಾರೆ.

ಈ ಹಿನ್ನೆಲೆಯಲ್ಲಿ, ಬಾಲಕಿಯ ಟಿಕ್‌ಟಾಕ್ ಖಾತೆಯನ್ನು ಟಿಕ್‌ಟಾಕ್ ಆಡಳಿತ ಮುಚ್ಚಿತು.

ಅಮೆರಿಕದ ಬಾಲಕಿಯನ್ನು ಸೆನ್ಸಾರ್ ಮಾಡಿರುವುದಕ್ಕೆ ಭಾರೀ ಟೀಕೆಗೊಳಗಾದ ಬಳಿಕ, ಟಿಕ್ ಟಾಕ್ ಕಂಪೆನಿಯು 17 ವರ್ಷದ ನ್ಯೂಜರ್ಸಿ ಹೈಸ್ಕೂಲ್ ಜೂನಿಯರ್ ಫಿರೋಝಾ ಅಝೀಝ್‌ರ ಖಾತೆಗೆ ಮತ್ತೆ ಚಾಲನೆ ನೀಡಿದೆ.

ಚೀನಾದ ಕಂಪೆನಿಗಳಿಂದ ಅನೈತಿಕ ಕೆಲಸ

ಚೀನಾದ ಹೆಚ್ಚಿನ ತಂತ್ರಜ್ಞಾನ ಕಂಪೆನಿಗಳು ಕ್ಸಿನ್‌ಜಿಯಾಂಗ್‌ನಲ್ಲಿ ಅತ್ಯಂತ ಅನೈತಿಕ ಕೆಲಸದಲ್ಲಿ ತೊಡಗಿವೆ; ಆ ಪ್ರದೇಶದಲ್ಲಿ ಈ ಕಂಪೆನಿಗಳು ಮಾಡುವ ಕೆಲಸವು ಬೃಹತ್ ಮಾನವಹಕ್ಕುಗಳ ಉಲ್ಲಂಘನೆಗಳಿಗೆ ನೇರವಾಗಿ ಬೆಂಬಲನೀಡುತ್ತದೆ ಎಂದು ವಿವರವಾದ ವರದಿಯೊಂದರಲ್ಲಿ ಆಸ್ಟ್ರೇಲಿಯನ್ ಸ್ಟ್ರಾಟಜಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಇಂಟರ್‌ನ್ಯಾಶನಲ್ ಸೈಬರ್ ಪಾಲಿಸಿ ಸೆಂಟರ್ ಹೇಳಿದೆ.

‘‘ಈ ಪೈಕಿ ಕೆಲವು ಕಂಪೆನಿಗಳು ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿಯಲ್ಲಿ, ಅದರಲ್ಲೂ ಮುಖ್ಯವಾಗಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಕಣ್ಗಾವಲು ಕ್ಷೇತ್ರಗಳಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿವೆ’’ ಎಂದು ವರದಿಯಲ್ಲಿ ಫರ್ಗಸ್ ರಯಾನ್, ಡೇನಿಯಲ್ ಕೇವ್ ಮತ್ತು ವಿಕಿ ಕ್ಸಿಯುರೊಂಗ್ ಕ್ಸು ಬರೆದಿದ್ದಾರೆ.

‘‘ಆದರೆ, ಈ ತಂತ್ರಜ್ಞಾನವನ್ನು ಸರ್ವಾಧಿಕಾರಿಗಳ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಂಪೆನಿಗಳು ಜಾಗತಿಕ ಮಟ್ಟಕ್ಕೆ ಹೋಗುವಾಗ, ಈ ತಂತ್ರಜ್ಞಾನವೂ ಜಾಗತಿಕ ಮಟ್ಟಕ್ಕೆ ಹೋಗುತ್ತದೆ’’ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News