'ಆರೆಸ್ಸೆಸ್ ಕಾರ್ಯಸೂಚಿಯೇ ಸರಕಾರದ ನೀತಿಯಾಗಿರುವುದಕ್ಕೆ ಪುರಾವೆ'

Update: 2019-11-29 16:21 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ನ. 29: ಭಾರತವು ಕಾಶ್ಮೀರದಲ್ಲಿ ‘ಇಸ್ರೇಲ್ ಮಾದರಿ’ಯನ್ನು ಅನುಸರಿಸಬೇಕು ಎಂಬುದಾಗಿ ಭಾರತೀಯ ರಾಜತಾಂತ್ರಿಕರೊಬ್ಬರು ನೀಡಿರುವ ಹೇಳಿಕೆಯು, ದೇಶದ ಅಧಿಕೃತ ಸರಕಾರಿ ನೀತಿಯು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ಫ್ಯಾಶಿಸ್ಟ್ ಕಾರ್ಯಸೂಚಿಯನ್ನು ಅಳವಡಿಸಿಕೊಂಡಿರುವುದರ ದೃಢೀಕರಣವಾಗಿದೆ ಎಂದು ಅಮೆರಿಕದ ಭಾರತೀಯ ಅಮೆರಿಕನ್ ಸಂಘಟನೆಗಳ ಒಕ್ಕೂಟವಾಗಿರುವ ‘ಅಲಯನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಅಕೌಂಟಬಿಲಿಟಿ (ಎಜೆಎ)’ ಹೇಳಿದೆ.

ಎಜೆಎಯಲ್ಲಿ ಹಿಂದೂ, ಮುಸ್ಲಿಮ್, ದಲಿತ, ಸಿಖ್ ಮತ್ತು ಕ್ರೈಸ್ತ ಹಾಗೂ ಇತರ ಸಂಘಟನೆಗಳಿವೆ.

ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕೌನ್ಸುಲ್ ಜನರಲ್ ಸಂದೀಪ್ ಚಕ್ರವರ್ತಿ ಖಾಸಗಿ ಕೂಟವೊಂದರಲ್ಲಿ ಮಾತನಾಡುತ್ತಾ ಈ ಹೇಳಿಕೆಯನ್ನು ನೀಡುವುದನ್ನು ತೋರಿಸುವ ವೀಡಿಯೊವೊಂದನ್ನು ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ.

‘‘ಫೆಲೆಸ್ತೀನ್ ಭೂಭಾಗಗಳನ್ನು ಇಸ್ರೇಲ್ ಅಕ್ರಮವಾಗಿ ಆಕ್ರಮಿಸಿಕೊಂಡು ಅವುಗಳನ್ನು ತನ್ನ ಭೂಭಾಗದೊಂದಿಗೆ ಸೇರ್ಪಡೆಗೊಳಿಸಿರುವುದನ್ನು ಭಾರತ ಸೇರಿದಂತೆ ಜಾಗತಿಕ ಸಮುದಾಯವು ದಶಕಗಳಿಂದ ವಿರೋಧಿಸುತ್ತಾ ಬಂದಿದೆ. ಇಸ್ರೇಲ್‌ನ ಈ ಅತಿಕ್ರಮಣವನ್ನು ಕಾಶ್ಮೀರಕ್ಕೆ ಮಾದರಿ ಎಂಬುದಾಗಿ ಬಿಂಬಿಸುವುದು ಆರೆಸ್ಸೆಸ್ ನ ಹಿಂದುತ್ವ ಫ್ಯಾಶಿಸ್ಟ್ ಸಿದ್ಧಾಂತದಲ್ಲಿ ಅಂತರ್ಗತವಾಗಿರುವ ಇಸ್ಲಾಮೊಫೋಬಿಯವನ್ನು ಬಯಲಿಗೆಳೆದಿದೆ’’ ಎಂದು ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್ (ಐಎಎಂಸಿ) ಅಧ್ಯಕ್ಷ ಅಹ್ಸಾನ್ ಖಾನ್ ಹೇಳಿದ್ದಾರೆ.

‘‘ಕಾಶ್ಮೀರ ಸಂಸ್ಕೃತಿಯು ಭಾರತೀಯ ಸಂಸ್ಕೃತಿಯಾಗಿದೆ, ಹಿಂದೂ ಸಂಸ್ಕೃತಿಯಾಗಿದೆ’’ ಎಂಬುದಾಗಿಯೂ ಚಕ್ರವರ್ತಿ ಹೇಳುವುದನ್ನು ವೀಡಿಯೊ ತೋರಿಸುತ್ತದೆ. ‘‘ಬಹುಸಂಖ್ಯಾತ ಸಮುದಾಯವಾಗಿ ನಮ್ಮ ಶಕ್ತಿಯನ್ನು ನಾವೆಂದೂ ಬಳಸಿಲ್ಲ. ಈಗ ನಾವು ಅದನ್ನು ಬಳಸುತ್ತಿರುವಾಗ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ’’ ಎಂದು ಮುಂದುವರಿಯುತ್ತಾ ಚಕ್ರವರ್ತಿ ಹೇಳುತ್ತಾರೆ.

‘‘ನನ್ನ ಜೀವಮಾನದಲ್ಲಿ ನಮ್ಮ ತಾಯ್ನಾಡನ್ನು ನಾವು ಹಿಂದಕ್ಕೆ ಪಡೆಯುತ್ತೇವೆ ಎಂದು ನಾನು ನಂಬಿದ್ದೇನೆ’’ ಎಂಬುದಾಗಿಯೂ ರಾಜತಾಂತ್ರಿಕ ಹೇಳುತ್ತಾರೆ.

ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ತೆರೇಸಾ ಮ್ಯಾಥ್ಯೂಸ್ ಆಫ್ ಸೌತ್ ಏಶ್ಯ ಸಾಲಿಡಾರಿಟಿ ಇನಿಶಿಯೇಟಿವ್ (ಎಸ್‌ಎಎಸ್‌ಐ), ‘‘ಇಂಥ ಹೇಳಿಕೆಗಳನ್ನು ಅಮೆರಿಕದಲ್ಲಿರುವ ಭಾರತದ ಎರಡನೇ ಅತ್ಯುನ್ನತ ರಾಜತಾಂತ್ರಿಕರಾದ ಕೌನ್ಸುಲ್ ಜನರಲ್ ನೀಡಿರುವುದು, ಕಾಶ್ಮೀರಿ ಮುಸ್ಲಿಮರ ವಿರುದ್ಧದ ಪ್ರಧಾನಿ ನರೇಂದ್ರ ಮೋದಿ ಸರಕಾರದ ಜನಾಂಗೀಯ ಹತ್ಯೆಯ ಉದ್ದೇಶಗಳನ್ನಷ್ಟೇ ತೆರೆದಿಡುತ್ತದೆ’’ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News