ಒಂದು ವರ್ಷದಲ್ಲಿ 10,100 ಚದರ ಕಿಲೋಮೀಟರ್ ಅಮೆಝಾನ್ ಅರಣ್ಯ ನಾಶ

Update: 2019-11-29 16:17 GMT

ಬ್ರೆಸೀಲಿಯ (ಬ್ರೆಝಿಲ್), ನ. 29: 2019 ಜುಲೈವರೆಗಿನ ಒಂದು ವರ್ಷದ ಅವಧಿಯಲ್ಲಿ ಅಮೆಝಾನ್ ಕಾಡಿನಲ್ಲಿ 10,000 ಚದರ ಕಿಲೋಮೀಟರ್‌ಗೂ ಅಧಿಕ ಅರಣ್ಯವನ್ನು ಕಡಿಯಲಾಗಿದೆ ಎಂಬುದಾಗಿ ಬ್ರೆಝಿಲ್ ಗುರುವಾರ ಬಿಡುಗಡೆ ಮಾಡಿದ ಪರಿಷ್ಕೃತ ಅಂಕಿಅಂಶಗಳು ತಿಳಿಸಿವೆ. ಇದು ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ವರ್ಷವೊಂದರಲ್ಲಿ ನಾಶವಾದ ಅತ್ಯಧಿಕ ಅರಣ್ಯ ಸಂಪತ್ತಾಗಿದೆ.

12 ತಿಂಗಳುಗಳ ಅವಧಿಯಲ್ಲಿ 9,762 ಚದರ ಕಿಲೋಮೀಟರ್ ಅರಣ್ಯ ಪ್ರದೇಶದ ಮರಗಳನ್ನು ಕಡಿಯಲಾಗಿದೆ ಎನ್ನುವುದನ್ನು ಉಪಗ್ರಹ ಅಂಕಿಅಂಶಗಳು ತೋರಿಸಿವೆ ಎಂದು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ರಿಸರ್ಚ್ (ಐಎನ್‌ಪಿಇ) ಕಳೆದ ವಾರ ಹೇಳಿತ್ತು. ಅದು ಕಳೆದ ವರ್ಷಕ್ಕೆ ಹೋಲಿಸಿದರೆ 29.5 ಶೇಕಡ ಹೆಚ್ಚಳವಾಗಿತ್ತು.

ಈ ವಾರ ಐಎನ್‌ಪಿಇ ಪರಿಷ್ಕೃತ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದ್ದು, ಅರಣ್ಯ ನಾಶವು ಭಾವಿಸಿರುವುದಕ್ಕಿಂತಲೂ ಹೆಚ್ಚಾಗಿದೆ ಎನ್ನುವುದನ್ನು ತೋರಿಸಿದೆ. ನೂತನ ಅಂಕಿಅಂಶಗಳ ಪ್ರಕಾರ, ಜುಲೈವರೆಗಿನ 12 ತಿಂಗಳ ಅವಧಿಯಲ್ಲಿ ಒಟ್ಟು 10,100 ಚದರ ಕಿಲೋಮೀಟರ್ ಅರಣ್ಯಪ್ರದೇಶ ನಾಶವಾಗಿದೆ ಹಾಗೂ ಇದು ಕಳೆದ ವರ್ಷಕ್ಕಿಂತ 43 ಶೇಕಡ ಅಧಿಕವಾಗಿದೆ.

2017 ಆಗಸ್ಟ್ ಮತ್ತು 2018 ಜುಲೈವರೆಗಿನ ಅವಧಿಯಲ್ಲಿ 7,033 ಚದರ ಕಿಲೋಮೀಟರ್ ಅರಣ್ಯ ಪ್ರದೇಶವನ್ನು ನಾಶಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News