​ನಿಟ್ಟೆ: ನ.30ರಿಂದ ಪ.ಪೂ. ವಿದ್ಯಾರ್ಥಿಗಳ ರಾಜ್ಯಮಟ್ಟದ ಹಾಕಿ

Update: 2019-11-29 16:43 GMT

ಉಡುಪಿ, ನ.29: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜು (ನಿಟ್ಟೆ ವಿದ್ಯಾ ಸಂಸ್ಥೆ) ಇವರ ಜಂಟಿ ಆಶ್ರಯದಲ್ಲಿ ನ.30ರಿಂದ ಡಿ.2ರವರೆಗೆ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಹಾಕಿ ಪಂದ್ಯಾಟ ನಡೆಯಲಿದೆ.

ರಾಜ್ಯದ 32 ಜಿಲ್ಲೆಗಳ ಸುಮಾರು 1,100 ವಿದ್ಯಾರ್ಥಿಗಳು ಹಾಗೂ 64 ಮಂದಿ ವ್ಯವಸ್ಥಾಪಕರು ಈಗಾಗಲೇ ನಿಟ್ಟೆಗೆ ಆಗಮಿಸಿ ದ್ದಾರೆ. ಪಂದ್ಯಾಟದ ಯಶಸ್ವಿಗೆ 100 ತಾಂತ್ರಿಕ ಅಧಿಕಾರಿಗಳು ಹಾಗೂ 150 ಮಂದಿ ಸ್ವಯಂ ಸೇವಕರು ಸಹಕರಿಸಲಿದ್ದಾರೆ. ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ವಸತಿವ್ಯವಸ್ಥೆಯನ್ನು ನಿಟ್ಟೆ ವಿದ್ಯಾ ಸಂಸ್ಥೆಯಲ್ಲಿ ಮಾಡಲಾಗಿದೆ.

ನಿಟ್ಟೆ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಈ ಹಿಂದೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾಟ ಹಾಗೂ ಶಟ್ಲ್ ಬ್ಯಾಂಡ್ಮಿಂಟನ್ ಪಂದ್ಯಾಟಗಳು ಯಶಸ್ವಿಯಾಗಿ ನಡೆದಿವೆ. ಈ ಪಂದ್ಯಾಟ ನಾಲ್ಕು ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈಗಾಗಲೇ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿದೆ.

ಉದ್ಘಾಟನೆ: ಪಂದ್ಯಾಟದ ಉದ್ಘಾಟನೆ ನಾಳೆ ನ.30ರ ಸಂಜೆ 5:00ಕ್ಕೆ ನಿಟ್ಟೆ ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿದೆ. ಪಂದ್ಯಾಟದ ದ್ವಜಾರೋಹಣ ವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದು, ರಾಜ್ಯ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಉಪಸ್ಥಿತಿಯಲ್ಲಿ ನಿಟ್ಟೆ ಡಾ.ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜಿನ ಸಂಚಾಲಕರಾದ ಎನ್.ವಿಶಾಲ್ ಹೆಗ್ಡೆ ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ.

ಸಮಾರೋಪ ಸಮಾರಂಭ ಡಿ.2ರ ಅಪರಾಹ್ನ 1:30ಕ್ಕೆ ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿದೆ. ನಿಟ್ಟೆ ಎನ್‌ಎಂಎಎಂಐಟಿಯ ಪ್ರಾಂಶುಪಾಲ ಡಾ.ನಿರಂಜನ್ ಚಿಪ್ಳೂಣ್‌ಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಹುಮಾನ ವಿತರಣೆ ಯನ್ನು ನಿಟ್ಟೆಯ ಪ್ರಗತಿಪರ ಕೃಷಿಕ ಅಶೋಕ ಅಡ್ಯಂತಾಯ ನೆರವೇರಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News