ಅಸ್ಸಾಂನ ಬಂಧನ ಕೇಂದ್ರಗಳಲ್ಲಿ 28 ಸಾವು: ಸರಕಾರ

Update: 2019-11-29 16:52 GMT

ಹೊಸದಿಲ್ಲಿ, ನ. 29: ಅಸ್ಸಾಂ ಬಂಧನ ಕೇಂದ್ರದಲ್ಲಿ ಮೃತಪಟ್ಟ 28 ಮಂದಿ ಶಂಕಿತ ವಲಸಿಗರು. ಆದರೆ, ಅವರು ಒತ್ತಡ ಅಥವಾ ಭೀತಿಯಿಂದ ಸಾವನ್ನಪ್ಪಿಲ್ಲ ಎಂದು ಸರಕಾರ ರಾಜ್ಯ ಸಭೆಯಲ್ಲಿ ಬುಧವಾರ ತಿಳಿಸಿದೆ.

ಅಸ್ಸಾಂನ 6 ಬಂಧನ ಕೇಂದ್ರಗಳಲ್ಲಿ 988 ವಿದೇಶಿಗರನ್ನು ಇರಿಸಲಾಗಿದೆ ಎಂದು ಸರಕಾರ ಲಿಖಿತ ಹೇಳಿಕೆ ಮೂಲಕ ಬಹಿರಂಗಗೊಳಿಸಿದೆ.

ಬಂಧನ ಕೇಂದ್ರಗಳಲ್ಲಿ ಸಾವನ್ನಪ್ಪುತ್ತಿರುವುದನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮೇಲ್ಮನೆಯಲ್ಲಿ ತೃಣಮೂಲ ಸಂಸದ ಸಂತನು ಸೇನ್ ಸರಕಾರದಲ್ಲಿ ಇಂದು ಪ್ರಶ್ನಿಸಿದರು. ಮೃತಪಟ್ಟ ಹೆಚ್ಚಿನವರು ಭೀತಿಯಿಂದ ಸಾವನ್ನಪ್ಪಿದರು ಎಂಬುದು ತಿಳಿದು ಬಂದಿದೆ ಎಂದು ಸೇನ್ ಹೇಳಿದರು.

  ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರದ ಸಹಾಯಕ ಸಚಿವ ನಿತ್ಯಾನಂದ ರಾಯ್, 28 ಮಂದಿ ಮೃತಪಟ್ಟಿದ್ದಾರೆ. ಆದರೆ, ಅವರಿಗೆ ಯಾವುದೇ ವೈದ್ಯಕೀಯ ಸೌಲಭ್ಯದ ಕೊರತೆ ಆಗಿಲ್ಲ. ಯಾರೊಬ್ಬರೂ ಯಾವುದೇ ಒತ್ತಡ ಅಥವಾ ಭೀತಿಯಿಂದ ಸಾವನ್ನಪ್ಪಿಲ್ಲ. ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅನಾರೋಗ್ಯ ಪೀಡಿತರಿಗೆ ವೈದ್ಯರು ಹಾಗೂ ಚಿಕಿತ್ಸೆ ಲಭ್ಯವಾಗಿದೆ ಎಂದಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ವಲಸೆ ಸಮಸ್ಯೆ ವಿರುದ್ಧ ಹೋರಾಟ ನಡೆಸುತ್ತಿರುವ ಅಸ್ಸಾಂ ಅಕ್ರಮ ವಲಸಿಗರನ್ನು ಬಂಧನ ಕೇಂದ್ರಗಳಿಗೆ ಕಳುಹಿಸುತ್ತಿದೆ. ಈ ಬಂಧನ ಕೇಂದ್ರಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಟೀಕೆಗೆ ಒಳಗಾಗಿದೆ.

ಬಂಧನ ಕೇಂದ್ರಗಳಲ್ಲಿ ವಿವಿಧ ಕಾರಣಗಳಿಗೆ ಸುಮಾರು 100 ಜನರು ಸಾವನ್ನಪ್ಪಿದ್ದಾರೆ. ಕೆಲವರು ಬಂಧನ ಕೇಂದ್ರದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ‘ಸಿಟಿಜನ್ ಫಾರ್ ಜಸ್ಟಿಸ್ ಆ್ಯಂಡ್ ಪೀಸ್’ (ಸಿಜೆಪಿ) ಹೇಳಿದೆ.

ಮೃತಪಟ್ಟವರ ಲೆಕ್ಕಾಚಾರವನ್ನು ಅಸ್ಸಾಂನಲ್ಲಿರುವ ಸಿಜೆಪಿ ಸಂಯೋಜಕ ಝಂಶೇರ್ ಅಲಿ ಸಂಗ್ರಹಿಸಿದ್ದಾರೆ. ಗೋಲ್‌ಪಾರ ಕೇಂದ್ರದಲ್ಲಿ ನಿಖಿಲ್ ಬರ್ಮನ್ ಇತ್ತೀಚೆಗೆ ಮೃತಪಟ್ಟಿರುವುದು ಸೇರಿ ಬಂಧನ ಕೇಂದ್ರಗಳಲ್ಲಿ ಒಟ್ಟು 29 ಮಂದಿ ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಾವುಗಳು 2016ರ ಬಳಿಕ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. 29ರಲ್ಲಿ 26 ಬಂಧಿತರ ಸಾವು ಅಸ್ಸಾಂನಲ್ಲಿ ಬಿಜೆಪಿಯ ಸರ್ಬಾನಂದ ಸೋನೋವಾಲ್ ಅಧಿಕಾರ ಬಂದ ನಂತರ ಸಂಭವಿಸಿದೆ. ಈ ಬಂಧನ ಕೇಂದ್ರಗಳು 2008ರಿಂದ ಕಾರ್ಯಾಚರಿಸುತ್ತಿವೆ. ಆದರೆ, ಈ ಹಿಂದಿನ ಸರಕಾರದ ಆಡಳಿತದಲ್ಲಿ ಇಷ್ಟೊಂದು ಸಾವು ಸಂಭವಿಸಿರುವುದನ್ನು ನಾವು ಕೇಳಿಲ್ಲ. ಬಿಜೆಪಿ ಆಡಳಿತ ಅವಧಿಯಲ್ಲಿ ಬಂಧಿತರ ಸಾವುಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಯಾಕೆ ಎಂದು ಅಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News