ಅಮೇರಿಕಾದಲ್ಲಿ ಶಿರ್ವ ಮೂಲದ ಯುವಕನ ಹತ್ಯೆ
ಉಡುಪಿ, ನ.29: ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡ್‌ಡಿನೋದ ಕ್ಯಾಲಿಪೋರ್ನಿಯ ಸ್ಟೇಟ್ ಯುನಿವರ್ಸಿಟಿಯ ಅಂತಿಮ ಸೆಮಿಸ್ಟರ್ ಎಂಎಸ್ (ಕಂಪ್ಯೂಟರ್ ಸೈನ್ಸ್) ವಿದ್ಯಾರ್ಥಿಯನ್ನು ದುಷ್ಕರ್ಮಿಯೊಬ್ಬ ಹಣೆಗೆ ಗುಂಡಿಟ್ಟು ಕೊಂದ ಘಟನೆ ಗುರುವಾರ ವರದಿಯಾಗಿದೆ.
ಶಿರ್ವ ಮೂಲದ ಮೈಸೂರು ಕುವೆಂಪು ನಗರ ನಿವಾಸಿ ಅಭಿಷೇಕ್ ಸುದೇಶ್ ಭಟ್ (25) ಇಂಜಿನಿಯರಿಂಗ್ ಪದವಿ ಬಳಿಕ ಸ್ನಾತಕೋತ್ತರ ಅಧ್ಯಯನಕ್ಕೆ 2018ರಲ್ಲಿ ಅಮೇರಿಕಾಕ್ಕೆ ತೆರಳಿದ್ದರು. ವಾರಾಂತ್ಯದಲ್ಲಿ ಅಭಿಷೇಕ್ ಮೋಟೆಲ್ (ಲಾಡ್ಜಿಂಗ್) ಒಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅಮೇರಿಕಾ ಕಾಲಮಾನ ನ.27ರಂದು ಮಧ್ಯಾಹ್ನ 12:30ಕ್ಕೆ ಅಭಿಷೇಕ್ ಮತ್ತು ಗ್ರಾಹಕನ ಮಧ್ಯೆ ಸಣ್ಣ ಮಾತಿನ ಚಕಮಕಿ ನಡೆದಿದ್ದು, ಆತ ಹಣೆಗೆ ರಿವಾಲ್ವರ್‌ನಿಂದ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಸಿಸಿ ಟಿವಿಯಲ್ಲಿ ಘಟನೆ ದಾಖಲಾಗಿದ್ದು, ಪೊಲೀಸರ ತಂಡ ತನಿಖೆ ಕೈಗೊಂಡಿದೆ ಅಮೆರಿಕದಿಂದ ಬಂದ ವರದಿಗಳು ತಿಳಿಸಿವೆ.
ಘಟನೆಯ ಕುರಿತಂತೆ ಅಭಿಷೇಕ್‌ರ ತಂದೆ ಯೋಗಗುರು ಸುದೇಶ್‌ಚಂದ್‌ಗೆ ನಿನ್ನೆ ಅಪರಾಹ್ನ 11:30ರ ಸುಮಾರಿಗೆ ಅಪರಿಚಿತ ದೂರವಾಣಿ ಕರೆಯಲ್ಲಿ ಮಾಹಿತಿ ತಿಳಿಸಿದ್ದು, ಆತ ಹೆಚ್ಚಿನ ಯಾವುದೇ ಮಾಹಿತಿ ತಿಳಿಸಿರಲಿಲ್ಲ. ಇದರಿಂದ ಆಘಾತಕ್ಕೊಳಗಾದ ಅಭಿಷೇಕ್ ಕುಟುಂಬ ದಿನವಿಡೀ ಮಾಹಿತಿಗಾಗಿ ಪರದಾಡಿದ್ದು, ಇಂದು ಮುಂಜಾನೆ 5:30ರ ಸುಮಾರಿಗೆ ಘಟನೆಯ ವಿವರಗಳು ತಿಳಿದುಬಂತು ಎಂದು ಕುಟುಂಬದ ಮೂಲವೊಂದು ತಿಳಿಸಿದೆ.
ಅಭಿಷೇಕ್ ಅವರನ್ನು ಅವರು ಅರೆಕಾಲಿಕ ಕೆಲಸ ಮಾಡುತಿದ್ದ ಹೊಟೇಲ್ ಒಳಗೆ ಗುಂಡಿಟ್ಟು ಕೊಲ್ಲಲಾಗಿದ್ದು, ಅವರ ಮೃತದೇಹ ವನ್ನು ಪೊಲೀಸ್ ತನಿಖೆ ಹಾಗೂ ಪ್ರಾಥಮಿಕ ರೀತಿ ರಿವಾಜುಗಳ ಬಳಿಕ ಬರ್ನಾರ್ಡ್‌ಡಿನೋದ ಆಸ್ಪತ್ರೆಯೊಂದರಲ್ಲಿ ಇರಿಸಲಾಗಿದೆ ಎಂದು ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.
ಅಭಿಷೇಕ್ ಅವರ ಫೇಸ್‌ಬುಕ್ ಪ್ರೊಪೈಲ್ ತಿಳಿಸುವಂತೆ ಅವರು 2018ರ ಅ.31ರಿಂದ ಕ್ಯಾಲಿಫೋರ್ನಿಯ ಸ್ಟೇಟ್ ವಿವಿಯ ಸ್ಯಾನ್‌ಬರ್ನಾರ್ಡ್‌ಡಿನೋ ಕಾಲೇಜ್ ಆಫ್ ನ್ಯಾಚುರಲ್ ಸಾಯನ್ಸ್‌ನಲ್ಲಿ ಟೀಚಿಂಗ್ ಅಸಿಸ್ಟೆಂಟ್ ಆಗಿದ್ದಾರೆ. ಹಾಗೂ ಸಿಎಸ್‌ಯುಎಸ್‌ಬಿಯಲ್ಲಿ ಕಂಪ್ಯೂಟರ್ ಸಾಯನ್ಸ್ (ಮಾಸ್ಟರ್ ಆಫ್ ಸಾಯನ್ಸ್) ಕಲಿಯುತಿದ್ದಾರೆ. ಹಿಂದಿ, ತುಳು, ಸಂಸ್ಕೃತ, ಇಂಗ್ಲೀಷ್ ಭಾಷೆ ತಿಳಿದಿದೆ ಹಾಗೂ ಅಭಿಶ್ರೇಷ್ಠ ಎಂಬ ಸಹೋದರ ಇದ್ದಾರೆ.
ಅಭಿಷೇಕ್ ಅವರು ಕುವೆಂಪುನಗರದಲ್ಲಿ ಉಪನಿಷದ್ ಯೋಗ ಸೆಂಟರ್‌ನ್ನು ನಡೆಸುತ್ತಿರುವ ಸುದೇಶ್‌ಚಂದ್ ಹಾಗೂ ನಂದಿನಿ ಐತಾಳ್ ದಂಪತಿಯ ಪುತ್ರ. ಮೈಸೂರಿನ ವಿದ್ಯಾವಿಕಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸಾಯನ್ಸ್‌ನಲ್ಲಿ ಪದವಿ ಪಡೆದ ಬಳಿಕ ಒಂದೂವರೆ ವರ್ಷದ ಹಿಂದೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.