ಡಿ.8ರಂದು ಲಂಡನ್‌ನಲ್ಲಿ ‘ಟ್ರಿಪಲ್ ತಲಾಕ್’ ಬ್ಯಾರಿ ಸಿನೆಮಾ ಪ್ರದರ್ಶನ

Update: 2019-11-30 10:12 GMT

ಉಡುಪಿ, ನ.30: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನೆಮಾ ನಿರ್ಮಾಪಕ ಯಾಕುಬ್ ಖಾದರ್ ಗುಲ್ವಾಡಿ ಮೊದಲ ಬಾರಿಗೆ ನಿರ್ದೇಶಿಸಿದ ‘ಟ್ರಿಪಲ್ ತಲಾಕ್’ ಬ್ಯಾರಿ ಭಾಷೆಯ ಚಲನ ಚಿತ್ರವು ಡಿ.8ರಂದು ಇಂಗ್ಲೆಂಡಿನ ನೈರುತ್ಯ ಕರಾವಳಿಯ ಬ್ರಿಸ್ಟನ್‌ನ ಸ್ಕಾಟ್ ಸಿನೆಮಾ ಮಂದಿರದಲ್ಲಿ ಮೊದಲ ಪ್ರದರ್ಶನ ಕಾಣಲಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಾಕುಬ್ ಖಾದರ್ ಗುಲ್ವಾಡಿ, ಕನ್ನಡದ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಬರೆದ ಕಥೆಯನ್ನು ಆಧರಿಸಿ ಈ ಸಿನೆಮಾವನ್ನು ತಯಾರಿಸಲಾಗಿದೆ. ತಲಾಕ್ ವಿಚಾರ ದಲ್ಲಿ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ತಪ್ಪು ಕಲ್ಪನೆಗಳಿವೆ. ಕುರಾನ್‌ನಲ್ಲಿ ತಲಾಕ್ ಬಗ್ಗೆ ಏನು ಹೇಳಲಾಗಿದೆ ಎಂಬುದನ್ನು ಹೇಳುವ ಪ್ರಯತ್ನವೇ ಈ ಸಿನೆಮಾ ಎಂದರು.

ತ್ರಿವಳಿ ತಲಾಕ್ ಸಮಸ್ಯೆ ಹಾಗೂ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನ ಸುತ್ತ ಕಥೆಯನ್ನು ಈ ಸಿನೆಮಾದಲ್ಲಿ ಹಣೆಯಲಾಗಿದೆ. 94 ನಿಮಿಷಗಳ ಅವಧಿಯ ಈ ಸಿನೆಮಾವನ್ನು ಕುಂದಾಪುರ, ಗುಲ್ವಾಡಿ, ಕೋಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರಕ್ಕೆ ನಿರ್ಮಾಪಕ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವನ್ನು ಯಾಕುಬ್ ಖಾದರ್ ಗುಲ್ವಾಡಿ ನೀಡಿ ದರೆ, ಮುಂಬೈಯ ನಾರಾಯಣ ಪ್ರಭಾ ಸುವರ್ಣ ಸಹನಿರ್ಮಾಪಕರಾಗಿದ್ದಾರೆ. ಈ ಮೊದಲು ಈ ಸಿನೆಮಾದ ಶೇ.90ರಷ್ಟು ಚಿತ್ರೀಕರಣವನ್ನು ಪೂರ್ಣ ಗೊಳಿಸಲಾಗಿತ್ತು. ಈ ಸಂದರ್ಭ ಸುಪ್ರೀಂ ಕೋರ್ಟ್ ತೀರ್ಪು ಬಂದ ಹಿನ್ನೆಲೆ ಯಲ್ಲಿ ಇಡೀ ಚಿತ್ರವನ್ನು ಮರುಚಿತ್ರೀಕರಣ ಮಾಡಲಾಗಿದೆ. ಹೀಗಾಗಿ ಈ ಸಿನೆಮಾಕ್ಕೆ ಸುಮಾರು 25ಲಕ್ಷ ರೂ. ವೆಚ್ಚವಾಗಿದೆ. ಈ ಸಿನೆಮಾದಲ್ಲಿ ರೂಪಾ ವರ್ಕಾಡಿ, ನವ್ಯಾ ಪೂಜಾರಿ, ಅಝರ್ ಷಾ, ರವಿಕಿರಣ್ ಮುರ್ಡೇಶ್ವರ, ಬೇಬಿ ಫಾತಿಮಾ, ಮಾಸ್ಟರ್ ಫಾಹದ್, ಮುಹಮ್ಮದ್ ಬಡ್ಡೂರು, ಎಂ.ಕೆ.ಮಾತಾ, ಎ.ಎಸ್.ಎನ್.ಹೆಬ್ಬಾರ್, ಹಂಝಾ ನಟಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನಟಿ ನವ್ಯಾ ಪೂಜಾರಿ, ನಟ ಅಝರ್ ಷಾ, ವಕೀಲ ರವಿಕಿರ್ ಮುರ್ಡೇಶ್ವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News