×
Ad

​ಮನಪಾ: ಬಜೆಟ್ ಕುರಿತು ಸಮಾಲೋಚನಾ ಸಭೆ

Update: 2019-11-30 18:05 IST

ಮಂಗಳೂರು, ನ. 30: ಮಹಾನಗರ ಪಾಲಿಕೆಯ 2020-21ನೆ ಸಾಲಿನ ಆಯವ್ಯಯ (ಬಜೆಟ್) ಕುರಿತಂತೆ ಸಾರ್ವಜನಿಕರಿಂದ ಸಲಹೆ, ಅಭಿಪ್ರಾಯಗಳನ್ನು ಪಡೆಯುವ ಸಲುವಾಗಿ ಆಯೋಜಿಸಲಾಗಿದ ಸಮಾಲೋಚನಾ ಸಭೆಯಲ್ಲಿ ನಗರದ ಸಮಸ್ಯೆಗಳ ಕುರಿತಂತೆಯೇ ಹೆಚ್ಚಿನ ಸಾರ್ವಜನಿಕರು ಮನಪಾ ಆಡಳಿತದ ಗಮನ ಸೆಳೆದರು.

ಮನಪಾ ಆಯುಕ್ತ ಶಾನಾಡಿ ಅಜಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ನಾಗರಿಕರ ಪರವಾದ ವಿವಿಧ ಜನಪರ ಸಂಘಟನೆಗಳ ಪ್ರತಿನಿಧಿಗಳು ಮನಪಾದ ಮುಂದಿನ ಬಜೆಟ್‌ನ ಆದಾಯ ಕ್ರೋಢೀಕರಣ ಹಾಗೂ ಅಭಿವೃದ್ಧಿ ಕುರಿತಂತೆ ಬಜೆಟ್‌ನಲ್ಲಿ ಹೇಗೆ ಅನುದಾನವನ್ನು ಹಂಚಬಹುದು ಎಂಬ ಬಗ್ಗೆ ಸಲಹೆ ನೀಡುವುದಕ್ಕಿಂತಲೂ ಹೆಚ್ಚಾಗಿ ಜನ ಸಾಮಾನ್ಯರನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತಂತೆಯೇ ಬೆಳಕು ಚೆಲ್ಲಿದರು.

ಪದ್ಮನಾಭ ಉಳ್ಳಾಲ್ ಮಾತನಾಡಿ, ಪಾಲಿಕೆಯಲ್ಲಿ 24x7 ಶುದ್ಧ ಕುಡಿಯುವ ನೀರು ಪೂರೈಕೆಯ ಭರವಸೆ ಇನ್ನೂ ಕಾರ್ಯ ಗತವಾಗಿಲ್ಲ. ಘನತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಹೇಳಿದರು. ನಗರಾದ್ಯಂತ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡುವ ಪೈಪ್‌ಗಳಲ್ಲಿ ಸೋರಿಕೆಯಾಗುತ್ತಿದೆ. ಈ ಬಗ್ಗೆ ಕ್ರಮವಾಗುತ್ತಿಲ್ಲ. ಸ್ಮಾರ್ಟ್ ಸಿಟಿ ಮಿಶನ್ ಗೈಡ್‌ಲೈನ್ಸ್‌ನಡಿ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಘನತ್ಯಾಜ್ಯ ವಿಲೇವಾರಿ ಪ್ರಮುಖ. ಆದರೆ ಈ ಬಗ್ಗೆ ಮಾಹಿತಿ ಹಕ್ಕಿನಡಿ ಕೇಳಿದರೆ, ತ್ಯಾಜ್ಯ ವಿಲೇವಾರಿ ಮನಪಾ ವ್ಯಾಪ್ತಿಗೆ ಬರುತ್ತದೆ ಎಂಬ ಉತ್ತರ ಸಿಗುತ್ತದೆ. ಕಾಂಕ್ರೀಟ್ ರಸ್ತೆಯ ಅಡಿಯಲ್ಲಿರುವ ನೀರು ಪೂರೈಕೆಯ ಪೈಪ್‌ಗಳಲ್ಲಿ 24 ಕಂಡೆ ಸೋರಿಕೆ ಇರುವ ಮಾಹಿತಿ ಇದೆ. ಅದಕ್ಕಾಗಿ ಟೆಂಡರ್ ಕರೆಯಲಾಗಿದೆ. ಆದರೆ ಟೆಂಡರ್ ಕರೆದು ಅದನ್ನು ದುರಸ್ತಿ ಮಾಡುವಾ ಅದೆಷ್ಟು ನೀರು ಸೋರಿಕೆಯಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತುರ್ತು ಕಾಮಗಾರಿಗಳು ನಡೆಯಬೇಕು. ಇಲ್ಲವಾದರೆ ಮನಪಾವು ಜನರ ತೆರಿಗೆಯ ಹಣವನ್ನು ಪೋಲು ಮಾಡಿದಂತಾಗುತ್ತದೆ ಎಂದು ಅವರು ಹೇಳಿದರು.

ಕಡಿಮೆ ಬಜೆಟ್, ಅಧಿಕ ಖರ್ಚು

ಮನಪಾದ ಬಜೆಟ್ ನಾಲ್ಕು ಕೋಟಿ ರೂ.ಗಳಾಗಿದ್ದರೆ, 18 ಕೋಟಿ ರೂ. ಖರ್ಚು ಮಾಡುವ ಪರಿಸ್ಥಿತಿ ಇದೆ. ಆಸ್ತಿ ತೆರಿಗೆ ಸಂಗ್ರಹದಲ್ಲಿ ಮನಪಾ ವೈಫಲ್ಯವನ್ನು ಕಾಣುತ್ತಿದೆ. ಸಂಪನ್ಮೂಲವಿಲ್ಲದೆ ಅಭಿವೃದ್ದಿ ಕಾಮಗಾರಿಗಳನ್ನು ನಡೆಸುವುದಾದರೂ ಹೇಗೆ? ಈ ಬಗ್ಗೆ ಗಮನ ಹರಿಸಬೇಕು ಎಂದು ಮನಪಾ ನೂತನ ಅವಧಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಸುಧೀರ್ ಶೆಟ್ಟಿ ಕಣ್ಣೂರು ಅಭಿಪ್ರಾಯಿಸಿದರು.

ಕಟ್ಟಡ ಪರವಾನಿಗೆ ಲೆಕ್ಕಾಚಾರ ಇನ್ನೂ 20 ಪೈಸೆ ಲೆಕ್ಕದಲ್ಲೇ ನಡೆಯುತ್ತೆ!

ಮನಪಾದಲ್ಲಿ ಕಟ್ಟಡ ಪರವಾನಿಗೆ ಶುಲ್ಕ 92-93ನೆ ಸಾಲಿನಲ್ಲಿ ಪರಿಷ್ಕರಣೆ ಆಗಿರುವಂತದ್ದು. ಹಾಗಾಗಿ ಮನಪದಾಲ್ಲಿ ಈಗಲೂ ಚದರ ಅಡಿಯ ಲೆಕ್ಕಾಚಾರ 20 ಪೈಸೆ ಲೆಕ್ಕಾಚಾರದಲ್ಲೇ ನಡೆಯುತ್ತಿರುವುದು ನಮ್ಮ ದುರಂತ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಹನುಮಂತ ಕಾಮತ್ ಹೇಳಿದರು.

ಕೆಎಂಸಿ ಕಾಯ್ದೆ ಪ್ರಕಾರ ಎಲ್ಲಾ ಸರಕಾರಿ ಕಚೇರಿಗಳೂ ಆಸ್ತಿ ತೆರಿಗೆ ಪಾವತಿಸಬೇಕು. ಆದರೆ ಮನಪಾದಲ್ಲಿ ಮಾತ್ರ ಇದರ ಸಂಗ್ರಹವೇ ಆಗುತ್ತಿಲ್ಲ. ಮನೆಗಳ ಕನಿಷ್ಠ ನೀರಿನ ಶುಲ್ಕವನ್ನು ತಲಾ 65 ರೂ.ನಿಂದ 350 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಆದರೆ ಹೋರ್ಡಿಂಗ್‌ನಿಂದ ತೆರಿಗೆ ಸಂಗ್ರಹಿಸುವ ಕೆಲಸವಾಗುತ್ತಿಲ್ಲ. ಆದರೆ ನೀರಿನ ಶುಲ್ಕವನ್ನು ಮಾತ್ರ ಬಾರೀ ಪ್ರಮಾಣದಲ್ಲಿ ಏರಿಕೆ ಮಾಡುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.

2013-14ನೆ ಸಾಲಿನಲ್ಲಿ ಮಂಗಳೂರು ವನ್‌ನಲ್ಲಿ 3 ಕೋಟಿ ರೂ. ಗೋಲ್ ಮಾಲ್ ಆಗಿರುವ ಪ್ರಕರಣಕ್ಕೆ ಸಂಧಿಸಿ ಸದನ ಸಮಿತಿಯಡಿ ತನಿಖೆಗೆ ಆದೇಶವಾಗಿತ್ತು. ಆದರೆ ಸದನ ಸಮಿತಿ ಮತ್ತೆ ಹಿಂದೆ ಸರಿದಿತ್ತು. ಆದರೆ ಪ್ರಕರಣ ನಡೆದು ಆರು ವರ್ಷ ವಾದರೂ ಯಾರನ್ನೂ ಹೊಣೆಯಾಗಿಸಿಲ್ಲ. ಇಂತಹ ಸೋರಿಕೆ ಬಗ್ಗೆ ಮನಪಾ ಗಮನ ಹರಿಸೇಕು ಎಂದು ಅವರು ಆಗ್ರಹಿಸಿದರು.

ಮನೆಯೊಂದಕ್ಕೆ ನೀರು ಪೂರೈಕೆಯಲ್ಲಿ ತೊಂದರೆ ಆದಾಗಾ ಸದಸ್ಯರ ಮೂಲಕ ಆ ಮನೆಗೆ ಹೊಸ ಪೈಪ್‌ಲೈನ್ ಹಾಕಿ ನೀರು ಸರಬರಾಜು ಮಾಡಲಾಗುತ್ತದೆ. ಹೀಗೆ ಕಳೆದ 10 ವರ್ಷಗಳಲ್ಲಿ ನಗರ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ನೀರಿನ ಪೈಪ್‌ಲೈನ್ ಲೆಕ್ಕಾಚಾರದಲ್ಲಿ ಚೀನಾಕ್ಕೆ ನೀರು ತಲುಪಬಹುದು. ಇಂತಹ ಅಕ್ರಮಗಳಿಗೆ ತಡೆ ಹಾಕಿದರೆ ಮನಪಾಕ್ಕೆ ಆದಾಯ ಖೋತವಾಗುವುದನ್ನು ತಪ್ಪಿಸಬಹುು ಎಂದು ಅವರು ಸಲಹೆ ನೀಡಿದರು.

ಕಂದಾಯ ಇಲಾಖೆಯಡಿ ಮನೆಗಳಖಾತಾ, ಉದ್ದಿಮೆ ಪರವಾನಿಗೆ ಮೊದಲಾದವುಗಳನ್ನು ತತ್ಕಾಲ್ ವ್ಯವಸ್ಥೆಯಡಿ ಶೀಘ್ರವೇ ಸಾರ್ವಜನಿಕರಿಗೆ ದೊರಕುವಂತಹ ವ್ಯವಸ್ಥೆಯ ಮೂಲಕ ಆದಾಯವನ್ನೂ ಗಳಿಸಲು ಸಾಧ್ಯವಿದೆ ಎಂದು ಅಭಿಪ್ರಾಯಿಸಿದರು.
ಸಭೆಯಲ್ಲಿ ಗೋಪಾಲ, ಅಶೆಲ್ ಫೆರ್ನಾಂಡಿಸ್, ಜಿ.ಕೆ. ಭಟ್, ರೂಪಾ ಡಿ. ಬಂಗೇರ, ಸುಮಿತ್ರ ಕರಿಯ ಮೊದಲಾದವರು ಕೆಲ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ವೇದಿಕೆಯಲ್ಲಿ ಮನಪಾ ಜಂಟಿ ಆಯುಕ್ತ ಡಾ. ಸಂತೋಷ್ ಕುಮಾರ್, ಕಂಯಾದ ವಿಭಾಗದ ುಪ ಆಯುಕ್ತರಾದ ಗಾಯತ್ರಿ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News