ಅಧಿಕಾರಿಗಳಿಂದ ಜೀವ ಬೆದರಿಕೆ ಎಂದು ಮುಖ್ಯಮಂತ್ರಿಗೆ ದೂರು ನೀಡಿದ ಶಾಸಕ

Update: 2019-11-30 14:13 GMT
ಮುಖ್ಯಮಂತ್ರಿ ಆದಿತ್ಯನಾಥ್

ಘಾಝಿಯಾಬಾದ್, ನ.30: ಸರಕಾರಿ ಅಧಿಕಾರಿಗಳು ಮಾಫಿಯಾದೊಂದಿಗೆ ಶಾಮೀಲಾಗಿ ತನ್ನ ಹೆಸರು ಕೆಡಿಸಲು ಮತ್ತು ತನ್ನ ಹತ್ಯೆಗೆ ಸಂಚು ನಡೆಸುತ್ತಿದ್ದಾರೆ ಎಂದು ಲೋನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್ ಅವರು ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ)ರಿಗೆ ಶುಕ್ರವಾರ ಬರೆದಿರುವ ಪತ್ರದಲ್ಲಿ ದೂರಿದ್ದಾರೆ.

ತನ್ನ ಸುರಕ್ಷತೆಗಾಗಿ ತನ್ನನ್ನು ಜೈಲಿಗೆ ಕಳುಹಿಸುವಂತೆಯೂ ಅವರು ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

‘ನಾನು ಹೊರಗಿದ್ದರೆ ಭ್ರಷ್ಟಾಚಾರ ಮತ್ತು ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಹೋರಾಡುವುದಾಗಿ ಪಣ ತೊಟ್ಟಿದ್ದೇನೆ. ಯಾವುದೇ ಸಂದರ್ಭದಲ್ಲಿಯೂ ಅವರು ನನ್ನ ಕ್ಷೇತ್ರದ ಜನರನ್ನು ವಂಚಿಸಲು ನಾನು ಅವಕಾಶ ನೀಡುವುದಿಲ್ಲ. ಈ ಹಿಂದೆಯೂ ಎರಡು ಬಾರಿ ನನ್ನ ಮೇಲೆ ದಾಳಿಗಳು ನಡೆದಿದ್ದು,ದೇವರ ದಯೆಯಿಂದ ನಾನು ಬದುಕುಳಿದಿದ್ದೇನೆ. ಈ ಬಗ್ಗೆಯೂ ನಾನು ಮುಖ್ಯಮಂತ್ರಿ ಮತ್ತು ಡಿಜಿಪಿಗೆ ತಿಳಿಸಿದ್ದೇನೆ ’ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗುರ್ಜರ್ ತಿಳಿಸಿದರು.

ತಾನು ಈ ಬಗ್ಗೆ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ್ದು ಅದರ ಆಧಾರದಲ್ಲಿ ಕೆಲವು ಅಧಿಕಾರಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದಾದ ಬಳಿಕ ಅವರು ತನ್ನ ಕಚೇರಿಗೆ ನುಗ್ಗಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದರು.

ಬಿಜೆಪಿಯ ಜಿಲ್ಲಾಧ್ಯಕ್ಷರು ಮಹಾನಗರ ಪಾಲಿಕೆ ಚುನಾವಣೆಗಳ ಸಂದರ್ಭ ಕೋಟ್ಯಂತರ ರೂ.ಸಂಗ್ರಹಿಸಿದ್ದಾರೆ. ಘಾಝಿಯಾಬಾದ್ ಸಂಸದ ಹಾಗೂ ಕೇಂದ್ರ ಸಚಿವ ವಿ.ಕೆ.ಸಿಂಗ್‌ ಅವರು ಪತ್ರ ಬರೆದ ಬಳಿಕ ಈ ವ್ಯಕ್ತಿಯ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಯುತ್ತಿದೆ. ಇದೇ ಜನರು ಈಗ ತನ್ನ ಹೆಸರು ಕೆಡಿಸಲು ಮತ್ತು ತನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಗುರ್ಜರ್ ಆರೋಪವನ್ನು ನಿರಾಕರಿಸಿದ,ಕಲಹದಲ್ಲಿ ಭಾಗಿಯಾಗಿದ್ದ ಅಧಿಕಾರಿಯೋರ್ವರು, “ಇಡೀ ವಿಷಯವು ಹೋಟೆಲ್‌ವೊಂದಕ್ಕೆ ಸಂಬಂಧಿಸಿದೆ. ಅಕ್ರಮವಾಗಿಯಾದರೂ ಸರಿ,ಆ ಹೋಟೆಲ್‌ನ್ನು ಮುಚ್ಚಿಸಬೇಕೆಂದು ಗುರ್ಜರ್ ಬಯಸಿದ್ದಾರೆ. ಆದರೆ ಆ ಹೋಟೆಲ್ ಕಾನೂನಿಗೆ ಬದ್ಧವಾಗಿ ನಡೆಯುತ್ತಿದೆ ಎಂದು ನಾವು ಅವರಿಗೆ ತಿಳಿಸಿದ್ದೆವು” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News