ಅಯೋಧ್ಯೆ ಪ್ರಕರಣ: ಡಿ.6ರಂದು ಸಂಘಪರಿವಾರದಿಂದ ‘ಶೌರ್ಯ ದಿವಸ’ ಆಚರಣೆ ಇಲ್ಲ

Update: 2019-11-30 14:16 GMT
PTI

ಲಕ್ನೊ, ನ.30: ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿರುವ ಹಿನ್ನೆಲೆಯಲ್ಲಿ , ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಘಟನೆಯ ವಾರ್ಷಿಕ ದಿನವನ್ನು ಶೌರ್ಯ ದಿವಸವನ್ನಾಗಿ ಆಚರಿಸುವುದು ಅಪ್ರಸ್ತುತವಾಗಿದೆ ಎಂದು ರಾಮ ಜನ್ಮಭೂಮಿ ನ್ಯಾಸದ ಮುಖ್ಯಸ್ಥ ಮಹಾಂತ ನೃತ್ಯಗೋಪಾಲ ದಾಸ್ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನ ತೀರ್ಪು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮಾರ್ಗವನ್ನು ಸ್ಪಷ್ಟಗೊಳಿಸಿದೆ. ಆದ್ದರಿಂದ ಡಿಸೆಂಬರ್ 6ರಂದು ಶೌರ್ಯ ದಿನ ಅಥವಾ ಕರಾಳ ದಿನ ಆಚರಿಸುವುದಕ್ಕೆ ಅರ್ಥವಿಲ್ಲ . ಡಿಸೆಂಬರ್ 6ರಂದು ಉದ್ವಿಗ್ನತೆಗೆ ಕಾರಣವಾಗುವ ರೀತಿಯಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಳ್ಳಬಾರದು. ತಮ್ಮ ಮನೆಯಲ್ಲಿ ಮತ್ತು ದೇವಸ್ಥಾನದಲ್ಲಿ ಮಣ್ಣಿನ ಹಣತೆಯಲ್ಲಿ ದೀಪ ಬೆಳಗಿಸಿ, ರಾಮನಾಮ ಜಪಿಸಬೇಕು ಎಂದವರು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ನೀಡಿರುವ ಸೂಚನೆಯ ಬಗ್ಗೆ ಸಂತರು ಗಮನ ಕೇಂದ್ರೀಕರಿಸಿದ್ದಾರೆ. ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ನಿರ್ಮಿಸುವ ಬಗ್ಗೆ ಸಂತರಲ್ಲಿ ಯಾವುದೇ ವಿವಾದವಿಲ್ಲ. ಭವ್ಯವಾದ ಮಂದಿರದಲ್ಲಿ ರಾಮಲಲ್ಲನನ್ನು ಪ್ರತಿಷ್ಟಾಪಿಸುವ ಕಾರ್ಯದಲ್ಲಿ ಎಲ್ಲಾ ಸಂತರೂ ಒಗ್ಗೂಡಿ ಕಾರ್ಯ ನಿರ್ವಹಿಸಲಿದ್ದಾರೆ ಎಂದವರು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ಹೇಳಿಕೆ ನೀಡಿರುವ ವಿಎಚ್‌ಪಿ ವಕ್ತಾರ ಶರದ್ ಶರ್ಮ, ತಮ್ಮ ಸಂಘಟನೆಯೂ ಶೌರ್ಯ ದಿವಸವನ್ನು ಆಚರಿಸುವುದಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News