ಸಂಸತ್ ಬಳಿ ಏಕಾಂಗಿ ಪ್ರತಿಭಟನೆ ನಡೆಸಿದ ಯುವತಿಗೆ ಪೊಲೀಸರಿಂದ ಥಳಿತ : ಆರೋಪ

Update: 2019-11-30 15:33 GMT

ಹೊಸದಿಲ್ಲಿ, ನ.30: ಮಹಿಳೆಯರ ಮೇಲಿನ ಅಪರಾಧಗಳ ವಿರುದ್ಧ ಯುವತಿಯೋರ್ವರು ಶನಿವಾರ ಸಂಸತ್ ಭವನದ ಸಮೀಪದ ಕಾಲುದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಅನು ದುಬೆ ಎಂದು ಗುರುತಿಸಲಾಗಿರುವ ಅವರು ‘ನನ್ನದೇ ಸ್ವಂತ ಭಾರತದಲ್ಲಿ ನಾನು ಸುರಕ್ಷಿತಳು ಎಂದು ನನಗೇಕೆ ಅನ್ನಿಸುವುದಿಲ್ಲ?’ ಎಂಬ ಭಿತ್ತಿಪತ್ರವನ್ನು ಹಿಡಿದುಕೊಂಡಿದ್ದರು.

ಪ್ರತಿಭಟನೆಯನ್ನು ಮುಂದುವರಿಸಲು ಜಂತರ್ ಮಂತರ್‌ಗೆ ತೆರಳುವಂತೆ ಪೊಲೀಸರ ಸೂಚನೆಯನ್ನು ದುಬೆ ತಿರಸ್ಕರಿಸಿದಾಗ ಅವರನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೋಲಿಸ್ ಠಾಣೆಗೆ ಕರೆದೊಯ್ಯಲಾಗಿತ್ತು ಮತ್ತು ಆ ಸಂದರ್ಭ ಅವರು ದುಃಖದಲ್ಲಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಕೆಲವು ಹಿರಿಯ ಅಧಿಕಾರಿಗಳು ಯುವತಿಯ ಅಳಲನ್ನು ಆಲಿಸಿ,ಬಳಿಕ ಅವರನ್ನು ಬಿಡುಗಡೆಗೊಳಿಸಿದರು ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ದುಬೆ,ತಾನು ಸರಕಾರದ ಅಧಿಕಾರಿಗಳನ್ನು ಭೇಟಿಯಾಗಲು ಬಯಸಿದ್ದೇನೆ ಎಂದು ತಿಳಿಸಿದರು.

ಇತ್ತೀಚಿಗೆ ಹೈದರಾಬಾದ್‌ನಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಅಮಾನುಷ ಘಟನೆಯಿಂದ ನೊಂದಿದ್ದ ವಿದ್ಯಾರ್ಥಿನಿ (ದುಬೆ) ಅನ್ಯಾಯದ ವಿರುದ್ಧ ಧ್ವನಿಯೆತ್ತಲು ಬಯಸಿದಾಗ ಪೊಲೀಸರು ಆಕೆಯನ್ನು ಠಾಣೆಯಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ. ತಾನು ಯುವತಿಯನ್ನು ಠಾಣೆಯಲ್ಲಿ ಭೇಟಿಯಾಗಿದ್ದೆ,ಆಕೆ ಭಯಗೊಂಡಿದ್ದಳು. ತಮ್ಮ ಧ್ವನಿಗಳನ್ನೆತ್ತುವವರಿಗೆ ಇದೇ ಗತಿ ಆಗಲಿದೆಯೇ? ಈ ಲಜ್ಜೆಗೇಡಿ ಘಟನೆಯ ಬಗ್ಗೆ ದಿಲ್ಲಿ ಮಹಿಳಾ ಆಯೋಗವು ನೋಟಿಸ್ ಹೊರಡಿಸಲಿದೆ. ಇದರಲ್ಲಿ ಭಾಗಿಯಾದವರ ವಿರುದ್ಧ ಎಫ್‌ಐಆರ್ ದಾಖಲಾಗಬೇಕಿದೆ ಎಂದು ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಟ್ವೀಟಿಸಿದ್ದಾರೆ. ಆದರೆ ಅವರ ಆರೋಪಗಳನ್ನು ದಿಲ್ಲಿ ಪೊಲೀಸರು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News