ಗೋಳಿಹೊಳೆ: ತಂತಿಬೇಲಿಯಲ್ಲಿ ಸಿಲುಕಿ ಹೆಣ್ಣು ಚಿರತೆ ಸಾವು

Update: 2019-11-30 14:51 GMT

ಬೈಂದೂರು, ನ. 30: ಆಹಾರ ಅರಸಿ ಬಂದ ಚಿರತೆಯೊಂದು ಗದ್ದೆಗೆ ಆಳವಡಿಸಿದ ತಂತಿಬೇಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ನ.30ರಂದು ಬೆಳಗಿನ ಜಾವ ಗೋಳಿಹೊಳೆ ಸಮೀಪದ ವನದಲಸು ಎಂಬಲ್ಲಿ ನಡೆದಿದೆ.

ಗದ್ದೆಯ ಸಮೀಪ ಆಳವಡಿಸಿದ ತಂತಿ ಬೇಲಿಗೆ ಆಹಾರ ಬೇಟೆಗಾಗಿ ನಾಡಿಗೆ ಬಂದ ಚಿರತೆಯ ಹಿಂಬದಿ ಕಾಲಿನ ಬೆರಳು ಸಿಲುಕಿ ಕೊಂಡಿತ್ತೆನ್ನಲಾಗಿದೆ. ಇದರಿಂದ ಬಿಡಿಸಿಕೊಳ್ಳಲು ಪರದಾಡಿದ ಚಿರತೆಯು ಸಮೀಪದ ಮರವನ್ನೇರಿ ಕೆಳಗೆ ಬಿತ್ತೆನ್ನಲಾಗಿದೆ. ಈ ಕುರಿತು ಸ್ಥಳೀಯರು ಬೆಳಗ್ಗೆ 7:30ರ ಸುಮಾರಿಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು.

ಅದರಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಬಲೆ ಹಾಕಿ ಚಿರತೆಯನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ತೀವ್ರವಾಗಿ ಗಾಯದಿಂದ ಅಸ್ವಸ್ಥಗೊಂಡಿದ್ದ ಚಿರತೆ ಅಧಿಕಾರಿಗಳ ಕಣ್ಣೆದುರೇ ಪ್ರಾಣ ಬಿಟ್ಟಿತು. ಸುಮಾರು ಎರಡು ಮೂರು ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದ್ದು, ಚಿರತೆಯ ಮರಣೋತ್ತರ ಪರೀಕ್ಷೆ ಯನ್ನು ಕೊಲ್ಲೂರು ಪಶುವೈದ್ಯಾಧಿಕಾರಿಗಳಿಂದ ನಡೆಸಲಾಯಿತು.

ಬಳಿಕ ಅದೇ ಸ್ಥಳದಲ್ಲಿ ಚಿರತೆಯ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಲೋಹಿತ್, ಬೈಂದೂರಿನ ಪ್ರಭಾರ ವಲಯ ಅರಣ್ಯಾಧಿ ಕಾರಿ ಪ್ರಭಾಕರ್ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಸಚಿ್ ಮೊದಲಾದವರು ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News