ಎಚ್‌ಐವಿ ಪರೀಕ್ಷೆ ಉಡುಪಿ ಜಿಲ್ಲೆ ಶೇ.159ರಷ್ಟು ಸಾಧನೆ : ಡಾ. ಚಿದಾನಂದ ಸಂಜು
ಉಡುಪಿ, ನ.30: ಉಡುಪಿ ಜಿಲ್ಲೆಯಲ್ಲಿ 2018-19ನೆ ಸಾಲಿನಲ್ಲಿ 37620 ಮಂದಿಗೆ ಎಚ್‌ಐವಿ ಪರೀಕ್ಷೆ ನಡೆಸುವ ಗುರಿಹೊಂದಿದ್ದು, 60033 ಮಂದಿಗೆ ಪರೀಕ್ಷೆ ನಡೆಸಿ ಶೇ.159ರಷ್ಟು ಸಾಧನೆ ಮಾಡಲಾಗಿದೆ. ಇದರಲ್ಲಿ ಶೇ.0.05 ಎಚ್‌ಐವಿ ಸೋಂಕಿತರನ್ನು ಗುರುತಿಸಲಾಗಿದೆ ಎಂದು ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಎಸ್.ವಿ. ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019-20 (ಅಕ್ಟೋಬರ್ ತಿಂಗಳವರೆಗೆ)ನೆ ಸಾಲಿನಲ್ಲಿ 56,064 ಗುರಿಯಲ್ಲಿ 36,870 ಮಂದಿ ಯನ್ನು ಪರೀಕ್ಷೆಗೆ ನಡೆಸಲಾಗಿದ್ದು, ಶೇ.65ರಷ್ಟು ಸಾಧನೆ ಮಾಡ ಲಾಗಿದೆ. ಇದರಲ್ಲಿ ಶೇ.0.38 ಮಂದಿ ಎಚ್‌ಐವಿ ಸೋಂಕಿತರನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದರು.
2015ರಿಂದಲೇ ತಾಯಿಯಿಂದ ಮಗುವಿಗೆ ಹರಡುವ ಸೋಂಕನ್ನು ತಡೆ ಗಟ್ಟುವಲ್ಲಿ ಶೇ100.956ಷ್ಟು ಸಾಧನೆಯನ್ನು ಮಾಡಲಾ ಗಿದ್ದು, ಕಳೆದ ಮೂರು ವರ್ಷಗಳಲ್ಲಿ ಹುಟ್ಟಿದ ಮಕ್ಕಳಲ್ಲಿ ಏಡ್ಸ್ ಸೋಂಕು ಪತ್ತೆಯಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ 1612 ಪುರುಷರು, 1918 ಮಹಿಳೆಯರು, 237 ಮಕ್ಕಳು ಹಾಗೂ 7 ಮಂದಿ ತೃತೀಯ ಲಿಂಗಿಯರು ಸೇರಿದಂತೆ ಒಟ್ಟು 3774 ಮಂದಿ ಏಡ್ಸ್ ರೋಗಿಗಳಿದ್ದು, ಇವರಿಗೆ ಉಡುಪಿ ಮತ್ತು ಕುಂದಾಪುರದಲ್ಲಿರುವ ಎ.ಆರ್.ಟಿ ಕೇಂದ್ರಗಳ ಮೂಲಕ ಅಗತ್ಯ ಚಿಕಿತ್ಸೆ ನೀಡಲಾ ಗುತ್ತಿದೆ ಎಂದರು.
ಜಿಲ್ಲೆಯಲ್ಲಿ 12 ಐಟಿಸಿಟಿ ಸೆಂಟರ್‌ಗಳಿದ್ದು, ಎಚ್‌ಐವಿಗೆ ಸಂಬಂಧಪಟ್ಟ ಆಪ್ತಸಮಾಲೋಚನೆಯನ್ನು ನೀಡಲಾಗುತ್ತದೆ. ಜಿಲ್ಲೆಯ ಎಲ್ಲಾ 64 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಚ್‌ಐವಿ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸುತ್ತಿದ್ದು, ಎಚ್‌ಐವಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಜಾಥ- ಜಾಗೃತಿ ಕಾರ್ಯಕ್ರಮ: ವಿಶ್ವ ಏಡ್ಸ್ ದಿನಾಚರಣೆಯ ಪ್ರಯುಕ್ತ ಸಮುದಾಯಗಳು ಬದಲಾವಣೆಯನ್ನುಂಟು ಮಾಡುತ್ತವೆ ಎಂಬ ಘೋಷವಾಕ್ಯ ದೊಂದಿಗೆ ಡಿ.3ರಂದು ಬೃಹತ್ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ.ಚಿದಾನಂದ ಸಂಜು ತಿಳಿಸಿದರು.
ಬೆಳಗ್ಗೆ 9:30ಕ್ಕೆ ಜಾಥಾ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾ ಧೀಶರು ಹಾಗೂ ಜಿಲ್ಲಾ ಕಾನೂನು ಸೆವೆಗಳ ಪ್ರಾಧಿಕಾ ರದ ಸದಸ್ಯ ಕಾರ್ಯ ದರ್ಶಿ ಕಾವೇರಿ ಉದ್ಘಾಟಲಿಸಲಿದ್ದು, ಬೆಳಗ್ಗೆ 10:30ಕ್ಕೆ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ವಿವೇಕಾನಂದ ಎಸ್.ಪಂಡಿತ್ ಉದ್ಘಾಟಿಸಲಿರುವರು.
ಜಿಲ್ಲೆಯ 35 ಕಾಲೇಜುಗಳ ಸಹಭಾಗಿತ್ವದೊಂದಿಗೆ ಜಿಲ್ಲೆಯಾದ್ಯಂತ ಎಚ್‌ಐವಿ ಏಡ್ಸ್ ಜಾಗೃತಿ ಕಾರ್ಯಕ್ರವನ್ನು ಹಮ್ಮಿಕೊಳ್ಳ ಲಾಗಿದ್ದು, ಇದರಲ್ಲಿ ರಕ್ತದಾನ ಶಿಬಿರ, ಜನಪದ ಕಲೆಯಾದ ಯಕ್ಷಗಾನದ ಮೂಲಕ ಮಾಹಿತಿ ನೀಡುವ ಕೆಲಸ ನಡೆಯಲಿದೆ. 265 ಸರಕಾರಿ ಶಾಲೆಗಳಲ್ಲಿ ಹದಿಹರೆಯದ ಮಕ್ಕಳಿಗೆ ಏಡ್ಸ್ ಹರಡುವಿಕೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ನಡೆಸಲಾ ಗುತ್ತದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಶ್ರೀರಾಮ್ ರಾವ್ ಉಪಸ್ಥಿತರಿದ್ದರು.