×
Ad

ಕಥೆಯಿಂದಲೇ ಮನುಷ್ಯ ಉನ್ನತ ಸ್ಥಾನಕ್ಕೇರಿದ್ದು: ಸಾಹಿತಿ ವಸುಧೇಂದ್ರ

Update: 2019-11-30 20:50 IST

ಮಂಗಳೂರು, ನ.30: ಮನುಷ್ಯ ಕಥೆ ಕಟ್ಟುವುದು, ಕಥೆ ಕೇಳಿಸಿಕೊಳ್ಳುವ ಮೂಲಕ ಕಥೆ ಹೇಳುವುದನ್ನು ಕಲಿತುಕೊಂಡನು. ಕಥೆಯಿಂದಲೇ ಮನುಷ್ಯ ಜೀವ ವೈವಿಧ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು ಎಂದು ಸಾಹಿತಿ, ಕಥೆ-ಕಾದಂಬರಿಕಾರ ವಸುಧೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ನಗರದ ಟಿಎಂಎ ಪೈ ಹಾಲ್‌ನಲ್ಲಿ ಮಂಗಳೂರು ಸಾಹಿತ್ಯೋತ್ಸವದಲ್ಲಿ ‘ಕಥೆಯ ಕಥೆ’ ಬಗ್ಗೆ ದಿವಾಕರ ಹೆಗ್ಡೆ ಅವರೊಂದಿಗೆ ಸಂವಾದ ನಡೆಸಿ, ತಮ್ಮ ಅಭಿಪ್ರಾಯಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.

ಪ್ರಾಚೀನ ಕಾಲದಲ್ಲಿ ದೈಹಿಕವಾಗಿ ಸಮರ್ಥವಾಗಿದ್ದ ಪ್ರಾಣಿಗಳೇ ಜೀವ ವೈವಿಧ್ಯದಲ್ಲಿ ಹಂತ ಹಂತವಾಗಿ ಸ್ಥಾನ ಪಡೆದಿದ್ದವು. ಆಗ ಮಾನವ ಕೊನೆ ಸ್ಥಾನದಲ್ಲಿದ್ದ. ಎಲ್ಲ ಪ್ರಾಣಿಗಳು ತಮ್ಮ ತಮ್ಮ ಭಾಷೆಗಳನ್ನು ಕಲಿತುಕೊಳ್ಳಲು ಆರಂಭಿಸಿದವು. ಅದರಂತೆ ಮಾನವ ಜೀವಿಯೂ ತನ್ನ ಭಾಷೆ ಕಲಿಯುವುದರ ಜತೆಗೆ ಕಥೆ ಕೇಳುತ್ತಾ; ಕಥೆ ಹೇಳಲು ಪ್ರಾರಂಭಿಸಿದನು. ಆ ಮೇಲೆಯೇ ಮಾನವನು ತಾರತಮ್ಯದ ಹಂತದಿಂದ ಹೊರಬಂದು ಮೇಲುಸ್ಥರದಲ್ಲಿ ಉಳಿದುಕೊಂಡ ಎಂದು ಪ್ರತಿಪಾದಿಸಿದರು.

ದೇಶವೂ ಕಥೆ, ಧರ್ಮವೂ ಕಥೆಯಾಗುತ್ತದೆ. ಕಥೆ ಕೇಳಿಸಿಕೊಂಡು ನಂಬಿಕೆ ಬೆಳೆಸಿಕೊಂಡರೆ ಅದು ನೈಜ ಕಥೆಯಾಗುತ್ತದೆ. ಕಥೆ ಎನ್ನುವುದು ಪುಣ್ಯಕಾವ್ಯ ಇದ್ದಂತೆ ಎಂದು ಕಾರಂತರು ಹೇಳಿದ್ದಾರೆ. ನೂರು ರೂಪಾಯಿ ಕೊಟ್ಟರೆ ಮಾನವನು ತನ್ನ ಕೈಯಲ್ಲಿನ ಬಾಳೆಹಣ್ಣನ್ನು ಕೊಟ್ಟುಬಿಡುವನು. ಆದರೆ ಚಿಂಪಾಂಜಿಗೆ ರೂಪಾಯಿ ಬೇಕಿಲ್ಲ; ಏಕೆಂದರೆ ಅದಕ್ಕೆ ರೂಪಾಯಿಯ ಮೌಲ್ಯ ತಿಳಿದಿಲ್ಲ. ಇಲ್ಲಿ ಎಲ್ಲವೂ ಕಥೆಯಾಗುತ್ತಾ ಹೋಗುತ್ತದೆ. ಜೀವನೇ ಒಂದು ಕಥೆಯಾಗಿದೆ. ಅದರಲ್ಲಿ ನಾವು ಪಾತ್ರಗಳು ಎಂದು ಹೇಳಿದರು.

ಐತಿಹಾಸಿಕ ಕಥೆಗಳನ್ನು ಬರೆಯುವುದಿದ್ದರೆ ತಕ್ಷಣದ ನಿಲುವು ತಾಳಬಾರದು. 500 ವರ್ಷಗಳ ಇತಿಹಾಸದ ಕುರಿತು ಕಾದಂಬರಿ ಬರೆಯುವ ಆಸಕ್ತರಿದ್ದಾರೆ. ಐತಿಹಾಸಿಕ ಕೃತಿಗಳನ್ನು ಈಗಲೂ ಬರೆಯಬಹುದು. ವಿಜಯನಗರ ಸಾಮಾಜ್ಯದ ಕುರಿತು ಕಾದಂಬರಿ ಬರೆಯುತ್ತಿದ್ದೇನೆ. ಜಾಗತೀಕರಣವೆಂದರೆ ಕೇವಲ ಇಂದಿನ ಜಗತ್ತು ಮಾತ್ರವಲ್ಲ, ವಿಜಯನಗರ ಸಾಮಾಜ್ಯದಲ್ಲೂ ಜಾಗತೀಕರಣ ಪ್ರಚಲಿತವಿತ್ತು ಎಂದರು.

ಕಾಲಘಟ್ಟದಲ್ಲಿ ಒಂದೊಂದು ಪಾತ್ರವೂ ಪ್ರಾಮುಖ್ಯತೆ ಪಡೆಯುತ್ತಾ ಹೋಗುತ್ತದೆ. ಮಹಾಭಾರತದ ಕೊನೆಭಾಗಕ್ಕೆ ಬಂದಂತೆ ಧರ್ಮರಾಯ ನಮಗೆ ಅತಿ ಹತ್ತಿರನಾಗುತ್ತಾನೆ. ಆದರೆ ಆತನ ಬಾಲ್ಯ ಬಗ್ಗೆ ನಮಗೆ ಬೇಕಿಲ್ಲ. ಅದರಂತೆ ಒಂದು ಸಂಸ್ಕೃತಿ ಎಲ್ಲರಿಗೂ ರುಚಿಸಬೇಕು ಅಂತ ಏನೂ ಇಲ್ಲ. ಆ ಸಂಸ್ಕೃತಿ ಮೇಲಿಂದ ಮೇಲೆ ವಿಶ್ಲೇಷಣೆಗೊಳಗಾಗುತ್ತಾ ಹೋದಂತೆ ಅದರ ಗಟ್ಟಿತನ ಉಳಿದುಕೊಳ್ಳುತ್ತದೆ ಎಂದು ತಿಳಿಸಿದರು.

ಬರವಣಿಗೆ ಖಾಸಗಿ ಸಂಗತಿ. ಎಲ್ಲ ಬರವಣಿಗೆಯೂ ಚಳವಳಿಯಾಗುವುದಿಲ್ಲ. ಇಲ್ಲಿಯವರೆಗೆ ನಾನು ಯಾವುದೇ ಚಳವಳಿಯ ಭಾಗವಾಗಿಲ್ಲ. ಬರವಣಿಗೆ ಚಳವಳಿಗೆ ಪ್ರೇರಣೆಯಾಗಬೇಕು ಎನ್ನುವುದು ಸಮಂಜಸವಲ್ಲ. ಆಯಾ ವ್ಯಕ್ತಿಯ ವೈಯಕ್ತಿಕ ವಿಚಾರವೇ ಕಥೆಯಾಗುತ್ತಾ ಹೋಗುತ್ತದೆ. ಇಲ್ಲಿ ಅನ್ಯ ವ್ಯಕ್ತಿ ಹಸ್ತಕ್ಷೇಪ ನಡೆಸಲು ಬರುವುದಿಲ್ಲ. ಇನ್ನೊಬ್ಬರನ್ನು ಮೆಚ್ಚಿಸಲು ಬರೆಯುವುದು ಕಥೆಯಾಗುವುದಿಲ್ಲ ಎಂದು ಅವರು ಪ್ರತಿಪಾದನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News