ನಕಲಿ ಸಹಿ ಬಳಸಿ ಗ್ರಾ.ಪಂ. ಸಿಬ್ಬಂದಿ ಅಮಾನತು ಆರೋಪ : ಕಣಿಯೂರು ಗ್ರಾ.ಪಂ. ವಿರುದ್ಧ ಪ್ರತಿಭಟನೆ

Update: 2019-11-30 15:24 GMT

ಉಪ್ಪಿನಂಗಡಿ : ನಕಲಿ ಸಹಿ ಬಳಸಿಕೊಂಡು ಷೋಕಾಸು ನೊಟೀಸ್ ನೀಡಿದಂತೆ ಬಿಂಬಿಸಿ ಕಣಿಯೂರು ಗ್ರಾ.ಪಂ. ಪಂಪು ನಿರ್ವಾಹಕ ಕಾಸಿಂ ಎ. ಅವರನ್ನು ಅನಧಿಕೃತವಾಗಿ ಕೆಲಸದಿಂದ ತೆಗೆಯಲಾಗಿದೆ ಎಂದು ಆರೋಪಿಸಿ ಹಾಗೂ ಕಣಿಯೂರು ಗ್ರಾ.ಪಂ.ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರವನ್ನು ಖಂಡಿಸಿ ಕಣಿಯೂರು ಗ್ರಾ.ಪಂ. ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಜಿ.ಪಂ. ಸದಸ್ಯ ಕೆ.ಕೆ. ಶಾಹುಲ್ ಹಮೀದ್, ಕಣಿಯೂರು ಗ್ರಾಮ ಪಂಚಾಯತ್ ಸಿಬ್ಬಂದಿ ಕಾಸಿಂ ಅವರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾ ಮಾಡಲಾಗಿದೆ. ಕಾಸಿಂ ಅವರ ನಕಲಿ ಸಹಿ ಬಳಸಿ ಸುಳ್ಳು ದಾಖಲೆ ಸೃಷ್ಟಿಸಿ ಗ್ರಾ.ಪಂ. ಅಧ್ಯಕ್ಷ ಸುನೀಲ್ ಸಾಲಿಯಾನ್ ಎಂಬವರು ವಂಚಿಸಿದ್ದಾರೆ. ಇಲ್ಲಿ ಕಾಸೀಂ ಅವರ ವಿರುದ್ಧ ಮೋಸದ ತಂತ್ರಗಾರಿಕೆಯಿಂದ ಪಿತೂರಿ ನಡೆಸಲಾಗಿದ್ದು, ನಕಲಿ ಸಹಿ ಮಾಡುವ ಮೂಲಕ ಸರಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ವಂಚಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದಲಿತ ನಾಯಕ ಅಣ್ಣು ಸಾದನ ಮಾತನಾಡಿ, ನಾನು ಓರ್ವ ಕುಡಿಯುವ ನೀರಿನ ಬಳಕೆದಾರ. ಕಾಸಿಂ ಅವರು ಸುಮಾರು 33 ವರ್ಷಗಳಿಂದ ನೀರು ಪಂಪು ಚಾಲಕ ವೃತ್ತಿ ಮಾಡುತ್ತಿದ್ದಾರೆ. ನಾನು ಗ್ರಾ.ಪಂ.ನ ನೀರು ಉಪಯೋಗಿಸುತ್ತಿದ್ದೇನೆ. ಅವರನ್ನು ಪಂಚಾಯತ್‍ನಿಂದ ವಜಾ ಮಡುವವರೆಗೂ ನೀರಿನಲ್ಲಿ ಕೆಸರು ಬಂದದ್ದು ನಾನು ಕಂಡಿಲ್ಲ. ಈ ಬಗ್ಗೆ ಯಾರೂ ಅವರ ವಿರುದ್ಧ ಪಂಚಾಯತ್‍ಗೆ ದೂರು ನೀಡಿದ್ದನ್ನೂ ನಾನು ಕೇಳಿಲ್ಲ. ಮತ್ತೇಕೆ ಈಗ ಆ ಪ್ರಶ್ನೆ ಉದ್ಭವವಾಯ್ತು ಎಂದು ಗೊತ್ತಾಗುತ್ತಿಲ್ಲ ಎಂದರು. 

ತಾ.ಪಂ. ಮಾಜಿ ಸದಸ್ಯ ಮಾಯಿಲ್ತೋಡಿ ಈಶ್ವರ ಭಟ್ ಮಾತನಾಡಿ, ಗ್ರಾ.ಪಂ. ಅಧ್ಯಕ್ಷರು ನನ್ನ ಮನೆ ಸಮೀಪ ಮಾಡಿದ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಈ ಹಿಂದೆಯೇ ನಾನು ಪ್ರಶ್ನಿಸಿದ್ದೆ. ಮುಂದೆ ಲೋಕಾಯುಕ್ತ ತನಿಖೆಯಾದರೆ ಎಲ್ಲವೂ ಬಯಲಾಗುತ್ತದೆ. ಓರ್ವ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲು ನೀತಿ ನಿಯಮಗಳಿವೆ ಎಂದರು.

ಗ್ರಾ.ಪಂ. ಸದಸ್ಯ ಅಬ್ದುಲ್ ಶುಕುರ್ ಮಾತನಾಡಿ, ಸಾಮಾನ್ಯ ಸಭೆಯಲ್ಲಿ ಸಿಬ್ಬಂದಿಯನ್ನು ವಜಾ ಮಾಡುವ ಅಧಿಕಾರ ಗ್ರಾ.ಪಂ. ಆಡಳಿತಕ್ಕೆ ಇಲ್ಲ. ಆದ್ದರಿಂದ ಇವರನ್ನು ವಜಾ ಮಾಡಿರುವ ಕ್ರಮ ಸರಿಯಲ್ಲ ಎಂದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಣಿಯೂರು ಗ್ರಾ.ಪಂ. ಸದಸ್ಯ ಸೀತಾರಾಮ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾ.ಪಂ. ಅಧ್ಯಕ್ಷ ಸುನಿಲ್ ಸಾಲಿಯಾನ್ ಅವರು ಕಾಸಿಂ ಅವರ ಬಗ್ಗೆ ಹಲವಾರು ದೂರುಗಳಿವೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಈ ಪ್ರತಿಭಟನೆಯ ಬಿಸಿಗೆ ಹೆದರಿ ಅವರ ವಿರುದ್ಧ ಇಲ್ಲಸಲ್ಲದ ಆರೋಪವೆಸಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಲು ಪ್ರಾರಂಭಿಸಿದ್ದಾರೆ. ಅಧ್ಯಕ್ಷರ ನಾಲ್ಕೂವರೆ ವರ್ಷಗಳ ಆಡಳಿತಾವಧಿಯಲ್ಲಿ ಕಾಸಿಂ ಅವರ ಬಗ್ಗೆ ಎಷ್ಟು ದೂರುಗಳು ಬಂದಿವೆ ಎನ್ನುವುದನ್ನು ಅಧ್ಯಕ್ಷರು ಸ್ಪಷ್ಟಪಡಿಸಲಿ ಎಂದರು.

ಕಣಿಯೂರು ಗ್ರಾ.ಪಂ. ಸದಸ್ಯರಾದ ಯಶೋಧರ ಶೆಟ್ಟಿ. ಸೋಮಯ್ಯ ನಾಯ್ಕ, ಗ್ರಾಮಸ್ಥರಾದ ಶೇಖರ ಶೆಟ್ಟಿ, ಪ್ರೇಮನಾಥ ಶೆಟ್ಟಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News